Kodagu

ಗೋಣಿಕೊಪ್ಪ :ಉಮಾಮಹೇಶ್ವರಿ ಬಡಾವಣೆಯಲ್ಲಿ 15ನೇ ವರ್ಷದ ಗೌರಿ-ಗಣೇಶೋತ್ಸವದ ಸಾಂಸ್ಕೃತಿಕ ಸಂಜೆ

admincoorgdaily

ಗೋಣಿಕೊಪ್ಪ :ಉಮಾಮಹೇಶ್ವರಿ ಬಡಾವಣೆಯಲ್ಲಿ 15ನೇ ವರ್ಷದ ಗೌರಿ-ಗಣೇಶೋತ್ಸವದ ಸಾಂಸ್ಕೃತಿಕ ಸಂಜೆ
ಗೋಣಿಕೊಪ್ಪ: ಗೋಣಿಕೊಪ್ಪದ ಉಮಾಮಹೇಶ್ವರಿ ಬಡಾವಣೆಯ ಪ್ರಸನ್ನ ಗಣಪತಿ ಸೇವಾ ಸಂಘದ ವತಿಯಿಂದ 15ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಸ್ಥಳೀಯರಿಗೆ ಸಾಂಸ್ಕೃತಿಕ ಸಂಜೆ ಏರ್ಪಡಿಸಲಾಗಿತ್ತು. 
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ ಅವರು ಗಿಡಕ್ಕೆ ನೀರು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ.ಎನ್. ಪ್ರಕಾಶ್, ಒಗ್ಗಟ್ಟಿನ ಮೂಲಕ ಗಣೇಶೋತ್ಸವ ಆಚರಣೆ ವರ್ಷದಿಂದ ವರ್ಷಕ್ಕೆ ಮುನ್ನಡೆಯುತ್ತಿದೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದ ಉತ್ಸವ, ಇಂದು ಒಂದನೇ ವಿಭಾಗದ ಜನರ ಪಾಲ್ಗೊಳ್ಳುವಿಕೆಯೊಂದಿಗೆ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಮಟ್ಟಕ್ಕೆ ಬೆಳೆದಿದೆ ಎಂದರು.

ಪ್ರತಿಯೊಬ್ಬರಲ್ಲೂ ಒಂದಲ್ಲೊಂದು ಪ್ರತಿಭೆ ಅಡಗಿರುತ್ತದೆ. ಅಂತಹ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಸಮುದಾಯದ ಜವಾಬ್ದಾರಿ. ಗಣೇಶೋತ್ಸವದಂತಹ ಸಾರ್ವಜನಿಕ ಆಚರಣೆಗಳು ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಮಕ್ಕಳ, ಯುವಕರ ಹಾಗೂ ಸ್ಥಳೀಯ ಕಲಾವಿದರ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಬೇಕು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅಡಗಿರುವ ಪ್ರತಿಭೆಗಳನ್ನು ಮುನ್ನೆಲೆಗೆ ತರಬೇಕು ಎಂದು ಅವರು ಕರೆ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳ ಕಲಾ ಪ್ರದರ್ಶನ ಗಮನ ಸೆಳೆಯಿತು. ಕಾರ್ಯಕ್ರಮವು ಬಡಾವಣೆಯ ಜನರನ್ನು ಒಂದೆಡೆ ಸೇರಿಸುವುದರ ಜತೆಗೆ, ಪರಸ್ಪರ ಬಾಂಧವ್ಯ ಮತ್ತು ಒಗ್ಗಟ್ಟಿನ ಸಂದೇಶವನ್ನೂ ಸಾರಿತು.

ಉದ್ಯಮಿ ಅಮೃತ್ ರಾಜ್, ಕಾಪ್ಸ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಸೋಮಯ್ಯ, ಪತ್ರಕರ್ತ ಅರುಣ್ ಕುಮಾರ್ ವಿ.ವಿ., ಪ್ರಸನ್ನ ಯುವಕ ಸಂಘದ ಉಪಾಧ್ಯಕ್ಷ ದಿಲೀಪ್ ಉಪಸ್ಥಿತರಿದ್ದರು.
ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. 
ಚೈತ್ರ ಸ್ವಾಗತಿಸಿದರು. ಆಶಾ ವಂದನಾರ್ಪಣೆ ನೆರವೇರಿಸಿದರು. 

ಸಂಘದ ಅಧ್ಯಕ್ಷ ಜಗದೀಶ್ ಜೋಡುಬೀಟಿ, ಉಪಾಧ್ಯಕ್ಷ ಅನಿಲ್, ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ ಅನ್ವಿತ್ ಹಾಗೂ ಪದಾಧಿಕಾರಿಗಳಾದ ಭರತ್, ಲಿನಾ ರಾಘವೇಂದ್ರ, ಮುರುಳಿ, ಮುಕೇಶ್, ಕೌಶಿಕ್, ಪ್ರಿಯಾ, ಸೌಜನ್ಯ, ಅನ್ವಿತಾ, ಪ್ರಜ್ವಲ್, ಅಜಿತಾ, ನವೀನ್ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.