Kodagu

ಗೋಣಿಕೊಪ್ಪ; ಕೆಪಿಎಸ್ ಶಾಲೆಯಲ್ಲಿ ಗಾಂಧೀಜಿ ಹಾಗೂ ಲಾಲ್ ಬಹುದ್ದೂರು ಶಾಸ್ತ್ರೀಯವರ ಜನ್ಮದಿನಾಚರಣೆ

admincoorgdaily

ಗೋಣಿಕೊಪ್ಪ; ಕೆಪಿಎಸ್ ಶಾಲೆಯಲ್ಲಿ ಗಾಂಧೀಜಿ ಹಾಗೂ ಲಾಲ್ ಬಹುದ್ದೂರು ಶಾಸ್ತ್ರೀಯವರ ಜನ್ಮದಿನಾಚರಣೆ
ಗೋಣಿಕೊಪ್ಪ: ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನು ಗೋಣಿಕೊಪ್ಪಲು ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಆಚರಿಸಲಾಯಿತು.

ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ, ವಿದ್ಯಾರ್ಥಿಗಳಿಗೆ ಇಬ್ಬರು ಮಹನೀಯರ ಹೋರಾಟದ ಬದುಕು, ಸರಳತೆ ಹಾಗೂ ದೇಶ ಸೇವೆಯ ಕುರಿತು ತಿಳಿಸಲಾಯಿತು.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಮಾತನಾಡಿ, ಗಾಂಧೀಜಿ ಹಾಗೂ ಶಾಸ್ತ್ರಿಯವರ ಸರಳ ಬದುಕು, ಹೋರಾಟದ ಹಾದಿ ಮತ್ತು ದೇಶದ ಬಗ್ಗೆ ಅವರಿಗಿದ್ದ ಬದ್ಧತೆಯನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಅವರ ಆದರ್ಶಗಳು ನಮ್ಮ ಬದುಕಿಗೆ ಬೆಳಕಾಗಲಿವೆ. ಮಹನೀಯರ ಜೀವನಚರಿತ್ರೆ ತಿಳಿದುಕೊಳ್ಳುವುದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಮಹಾತ್ಮ ಗಾಂಧೀಜಿ ಸ್ವಾತಂತ್ರ‍್ಯ ಹೋರಾಟದ ಮುಂಚೂಣಿಯಲ್ಲಿ ನಿಂತು ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಜತೆಗೆ ಸ್ವಚ್ಛತೆ, ಬಡತನ ನಿರ್ಮೂಲನೆ ಹಾಗೂ ಸಾಮಾಜಿಕ ಸಮಾನತೆಯ ವಿಚಾರಗಳ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಿದರು. ಅವರ ಸರಳತೆ, ಸತ್ಯ ಮತ್ತು ಅಹಿಂಸೆಯ ತತ್ವಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಕವಾಗಿವೆ ಎಂದು ತಿಳಿಸಿದರು.

ಲಾಲ್ ಬಹದ್ದೂರ್ ಶಾಸ್ತ್ರಿಯವರು ಸಹ ತಮ್ಮ ಸರಳತೆ ಹಾಗೂ ನೈತಿಕ ಬದ್ಧತೆಯಿಂದ ಆದರ್ಶ ರಾಜಕಾರಣಿಯಾಗಿ ಗುರುತಿಸಿಕೊಂಡವರು. ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಸಂಭವಿಸಿದ ರೈಲು ಅಪಘಾತದ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರ ನಡೆ ಸಾರ್ವಜನಿಕ ಜೀವನದಲ್ಲಿ ಹೊಣೆಗಾರಿಕೆಯ ಮಹತ್ವವನ್ನು ತೋರಿಸುತ್ತದೆ. ಇಂತಹ ಆದರ್ಶಗಳು ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕು ಎಂದರು.

ಮುಖ್ಯೋಪಾಧ್ಯಾಯ ಹೆಚ್.ಕೆ. ಕುಮಾರ್ ಮಾತನಾಡಿ, ಗಾಂಧೀಜಿಯವರ ಸ್ವಾತಂತ್ರ‍್ಯ ಹೋರಾಟದ ಪ್ರಭಾವ ಕೊಡಗಿನಲ್ಲಿಯೂ ಕಂಡುಬAದಿದೆ. ಕೊಡಗಿನ ಲೇಖಕಿ ಗೌರಮ್ಮ ಅವರು ಗಾಂಧೀಜಿಯವರ ವಿಚಾರಗಳಿಂದ ಪ್ರೇರಣೆ ಪಡೆದು ತಮ್ಮ ಒಡವೆಗಳನ್ನು ಸ್ವಾತಂತ್ರ‍್ಯ ಹೋರಾಟಕ್ಕೆ ದಾನ ಮಾಡಿದಂತಹ ಘಟನೆಗಳು ಕೊಡಗಿನ ನೆಲದಲ್ಲಿ ನಡೆದಿವೆ. ಇಂತಹ ಸ್ಫೂರ್ತಿದಾಯಕ ಇತಿಹಾಸವನ್ನು ವಿದ್ಯಾರ್ಥಿಗಳು ತಿಳಿದುಕೊಂಡು ತಮ್ಮ ಬದುಕನ್ನು ಆದರ್ಶಮಯವಾಗಿ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ನಂತರ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂಸಿ ಸದಸ್ಯರು ಶಾಲಾ ಆವರಣ ಮತ್ತು ಸುತ್ತಮುತ್ತ ಸ್ವಚ್ಛತಾ ಅಭಿಯಾನ ನಡೆಸಿದರು.
ಎಸ್‌ಡಿಎಂಸಿ ಉಪಾಧ್ಯಕ್ಷೆ ದಿವ್ಯ, ಸದಸ್ಯೆ ಅನಿತಾ, ಶಿಕ್ಷಕರಾದ ಜೋಸ್ಲಿಯ, ಇಂದಿರಾ, ದಮಯಂತಿ, ಅನಿತಾ ಕುಮಾರಿ, ಯಶ್ವಿನಿ, ಅರ್ಷಿಯ, ಕ್ಲೆಮೆಂಟಿನ್, ಸಹನಾ, ಶಾರದಾ, ನಾಗರಾಜು, ಸ್ನೇಹ, ಕಾವೇರಮ್ಮ, ಮಂಜುಳಾ, ಸಿದ್ದರಾಜು, ಪೂಜಾ, ಪಾರ್ವತಿ, ಕಚೇರಿ ಸಿಬ್ಬಂದಿ ಕೀರ್ತಿ, ಪೂಜಾ ಹಾಗೂ ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು.