ಗೋಣಿಕೊಪ್ಪ ದಸರಾ: ದಶಮಂಟಪ ಸಮಿತಿಗಳೊಂದಿಗೆ ಶಾಸಕ ಎ.ಎಸ್.ಪೊನ್ನಣ್ಣ ವಿಶೇಷ ಸಭೆ - ತಲಾ 2.5 ಲಕ್ಷ ಅನುದಾನ ಘೋಷಣೆ
admincoorgdaily

ಗೋಣಿಕೊಪ್ಪ: ಗೋಣಿಕೊಪ್ಪ ದಸರಾ ದಶಮಂಟಪ ಸಮಿತಿಯವರೊಂದಿಗೆ ವಿರಾಜಪೇಟೆ ಶಾಸಕರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ಶ್ರೀ ಕಾವೇರಿ ದಸರಾ ಜನೋತ್ಸವದ ಅಧ್ಯಕ್ಷರೂ ಆಗಿರುವ ಎ.ಎಸ್.ಪೊನ್ನಣ್ಣ ಅವರು ವಿಶೇಷ ಸಭೆ ನಡೆಸಿದರು.
ಈ ಬಾರಿಯ ದಸರಾ ಜನೋತ್ಸವ ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು, ಕೊನೆಯ ದಿನದ ಶೋಭಾಯಾತ್ರೆಯ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆ ನಡೆಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲರೂ ಜಾಗೃತಿ ವಹಿಸಬೇಕು ಎಂದು ಕರೆ ನೀಡಿದರು.
ದಶಮಂಟಪ ಸಮಿತಿಗಳಿಗೆ ತಲಾ ರೂ.2.5 ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದ ಶಾಸಕರು, ಶೋಭಾಯಾತ್ರೆಯಲ್ಲಿ ಉತ್ತಮವಾಗಿ ಮೂಡಿಬರುವ ತಂಡಕ್ಕೆರೂ.1 ಲಕ್ಷ ಬಹುಮಾನ ನೀಡುವುದಾಗಿ ತಿಳಿಸಿದರು.
ದಸರಾ ಜನೋತ್ಸವ ಹೀಗೆಯೇ ಮುಂದುವರಿದು ನಾಡಿನ ಸಮಸ್ತ ಜನತೆಗೆ ಒಳಿತಾಗಲಿ ಎಂದು ಹಾರೈಸಿದರು.
ಸಭೆಯಲ್ಲಿ ಕಾವೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಮೋದ್ ಗಣಪತಿ, ಪ್ರಧಾನ ಕಾರ್ಯದರ್ಶಿ ಕಂದದೇವಯ್ಯ, ಪ್ರಧಾನ ಸಂಚಾಲಕ ಬಿ.ಎಂ.ಪ್ರಕಾಶ್, ದಶಮಂಟಪ ಅಧ್ಯಕ್ಷ ಚೇತನ್ ಸೇರಿದಂತೆ ದಸರಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.