Kodagu

ಗೋಣಿಕೊಪ್ಪ; ಕೈಗ್ ಹಾಕಿ ಕಪ್-2026 ಗೆ ಚಾಲನೆ - ಶಾಸಕ ಪೊನ್ನಣ್ಣರಿಂದ ಉದ್ಘಾಟನೆ

admincoorgdaily

ಗೋಣಿಕೊಪ್ಪ; ಕೈಗ್ ಹಾಕಿ ಕಪ್-2026 ಗೆ ಚಾಲನೆ - ಶಾಸಕ ಪೊನ್ನಣ್ಣರಿಂದ ಉದ್ಘಾಟನೆ
ಗೋಣಿಕೊಪ್ಪಲು: ಹಾಕಿ ಇಂಡಿಯಾ, ಕೈಗ್ ಸ್ಪೋರ್ಟ್ಸ್ ಫೌಂಡೇಶನ್ ಹಾಗೂ ಕಾವೇರಿ ರಾಯಲ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ಗೋಣಿಕೊಪ್ಪಲುವಿನ ಕಾಲ್ಸ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ಎರಡನೇ ಆವೃತ್ತಿಯ ಕೈಗ್ ಹಾಕಿ ಕಪ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ  ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಇಂದು ಉದ್ಘಾಟಕರಾಗಿ ಭಾಗವಹಿಸಿದರು.

ಗೋಣಿಕೊಪ್ಪಲುವಿನಲ್ಲಿ ನಡೆಯುತ್ತಿರುವ ಈ ಹಾಕಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದ ಮಾನ್ಯ ಶಾಸಕರು, ಕೊಡಗು ಜಿಲ್ಲೆ ಹಲವು ವೈಶಿಷ್ಟ್ಯತೆಗಳಿಗೆ ಹೆಸರುವಾಸಿಯಾಗಿದ್ದು, ಅವುಗಳಲ್ಲಿ ಹಾಕಿ ಕ್ರೀಡೆ ಪ್ರಮುಖವಾದುದು. ಕೊಡಗಿನ ಅನೇಕ ಹಾಕಿ ಪಟುಗಳು ದೇಶಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಇಲ್ಲಿನ ಕ್ರೀಡಾ ಪ್ರತಿಭೆಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಇಂತಹ ಕ್ರೀಡಾಕೂಟಗಳು ಹೆಚ್ಚಿನ ಪ್ರೋತ್ಸಾಹ ನೀಡಲಿವೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬ ಆಟಗಾರರೂ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಲಿ ಎಂದು ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಕೈಗ್ ಗ್ರೂಪ್‌ನ ಮುಖ್ಯಸ್ಥರಾದ ಕುಟ್ಟಂಡ ಸುದಿನ್ ಮಂದಣ್ಣ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪ್ಪುಡೀರ ಅರುಣ್ ಮಾಚಯ್ಯ, ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುಜಾ ಕುಶಾಲಪ್ಪ, ಒಲಿಂಪಿಯನ್ ಬಿ. ಸುಬ್ಬಯ್ಯ, ಅಂತರರಾಷ್ಟ್ರೀಯ ಹಾಕಿ ಆಟಗಾರ ಕೆ.ಕೆ. ಪೂಣಚ್ಚ, ಹಿರಿಯ ತರಬೇತುದಾರರಾದ ಬಿ.ಜೆ. ಕಾರ್ಯಪ್ಪ, ಹಾಕಿ ಕೂರ್ಗ್ ಅಧ್ಯಕ್ಷರಾದ ಲವಕುಮಾರ್, ಕಾವೇರಿ ರಾಯಲ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ಅಧ್ಯಕ್ಷರಾದ ಸದಾ ಅಪ್ಪಚ್ಚು, ಸೇರಿದಂತೆ ಹಲವು ಗಣ್ಯರು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.