Kodagu

ಗೋಣಿಕೊಪ್ಪ ಪ್ರಾಥಮಿಕ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 1.59 ಕೋಟಿ ರೂ ಲಾಭ

admincoorgdaily

ಗೋಣಿಕೊಪ್ಪ ಪ್ರಾಥಮಿಕ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ  1.59 ಕೋಟಿ ರೂ ಲಾಭ
ಪೊನ್ನಂಪೇಟೆ, ಸೆ 21; ಗೋಣಿಕೊಪ್ಪ ಪ್ರಾಥಮಿಕ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘವು 1.59 ಕೋಟಿ ರೂ. ಲಾಭದಲ್ಲಿದೆ ಎಂದು ಸಂಘದ ಅಧ್ಯಕ್ಷ ಕುಪ್ಪಂಡ ಎಂ. ಚಿಟ್ಟಿಯಪ್ಪ ತಿಳಿಸಿದರು.
  ಸಂಘದ ಕಟ್ಟಡದಲ್ಲಿ ಆಯೋಜಿಸಿದ್ದ ಮಹಾಸಭೆಯಲ್ಲಿ ಮಾತನಾಡಿ, 488.14 ಕೋಟಿ ರೂ. ವ್ಯವಹಾರ ನಡೆಸಿ, 1.59 ಕೋಟಿ ರೂ ಲಾಭ ಪಡೆದುಕೊಂಡಿದೆ. ಸದಸ್ಯರಿಗೆ ಶೇ. 25 ರಷ್ಟು ಡಿವಿಡೆಟ್ ನೀಡಲಾಗುವುದು. ಸಂಘದ ವಜ್ರ ಮಹೋತ್ಸವ ನೆನಪಿಗಾಗಿ ವಾಚು ಮತ್ತು ಊಟದ ಖರ್ಚು 500 ರೂ. ನೀಡಲಾಗುವುದು ಎಂದರು.

  2.09 ಕೋಟಿ ರೂ. ಪಾಲು ಬಂಡವಾಳ ಹೊಂದಿದ್ದು, 2,141 ಎ ತರಗತಿ ಸದಸ್ಯರನ್ನು ಹೊಂದಲಾಗಿದೆ. 100.16 ಕೋಟಿ ಠೇವಣಿ ಸಂಗ್ರಹಣೆಯೊAದಿಗೆ ಸದಸ್ಯರುಗಳಿಗೆ 79.36 ಕೋಟಿ ಸಾಲವನ್ನು ನೀಡಲಾಗಿತ್ತು, ಶೇ. 98.7 ಸಾಲ ವಸೂಲಾತಿ ಮಾಡಲಾಗಿದೆ ಎಂದು ತಿಳಿಸಿದರು. ವ್ಯಾಪಾರ ವಿಭಾಗದಲ್ಲಿ 3.76 ಕೋಟಿ ಲಾಭ ಗಳಿಸಿದೆ ಎಂದು ತಿಳಿಸಿದರು.
  ಠೇವಣಿಗಾರರ ಹಿತ ಕಾಪಾಡಲು ಆಕರ್ಷಕ ಬಡ್ಡಿ ನೀಡಲಾಗುವುದು. ರೈತರ ಶ್ರೇಯೋಭಿವೃದ್ದಿಗಾಗಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ತ್ವರಿತಗತಿಯಲ್ಲಿ ಸಾಲ ಸೌಲಭ್ಯ ನೀಡುವುದು, ಸಾಲ ವಸೂಲಾತಿಗೂ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

  5 ಲಕ್ಷವರೆಗೆ ವ್ಯಾಪಾರ ಸಾಲ, 3 ಲಕ್ಷದವರೆಗೆ ಜಾಮೀನು ಸಾಲ, ಮನೆ ನಿರ್ಮಾಣಕ್ಕೆ 50 ಲಕ್ಷ, ಸದಸ್ಯರ ತುರ್ತು ಸಂದರ್ಭದಲ್ಲಿ ಮದುವೆ, ಆಸ್ಪತ್ರೆ ಖರ್ಚು ವೆಚ್ಚ ಭರಿಸಲು 5 ಲಕ್ಷದವರೆಗೆ ಸಾಲ ನೀಡಲಾಗುವುದು ಎಂದು ತಿಳಿಸಿದರು.

  75 ವರ್ಷ ಪೂರೈಸಿರುವ ನೆನಪಿಗಾಗಿ ಗೋಣಿಕೊಪ್ಪ ಹೃದಯ ಭಾಗದಲ್ಲಿ 10 ಕೋಟಿ ರೂ. ಬೆಲೆ ಬಾಳುವ ಭವ್ಯ ಕಟ್ಟಡ ಎಲ್ಲ ಅನುಕೂಲಗಳೊಂದಿಗೆ ನಿರ್ಮಿಸಲಾಗಿದ್ದು, ಬ್ಯಾಂಕ್ ವ್ಯವಸ್ಥೆ, ಸಿಸಿ ಕ್ಯಾಮರಾ, ಪೀಠೋಪಕರಣ, ಭದ್ರತಾ ಕರೆ ಗಂಟೆ, 8 ಸೇಫ್ ಲಾಕರ್ ವ್ಯವಸ್ಥೆ, ಆಭರಣಗಳ ಸುರಕ್ಷತೆಗೆ ಲಾಕರ್ ಸೇರಿದಂತೆ ಅಗ್ನಿ ಶಾಮಕ ಯಂತ್ರ ಅಳವಡಿಸಿ ಅಭಿವೃದ್ದಿ ಪಡಿಸಲಾಗಿದೆ. ಕಟ್ಟಡದಲ್ಲಿರುವ ಥಿಯೇಟರ್ ವ್ಯವಸ್ಥೆ ಕಲಾಭಿಮಾನಿಗಳಿಗೆ ಪ್ರಯೋಜನವಾಗಿದೆ. ದಕ್ಷ ಆಡಳಿತ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ. ಕೆ. ಪ್ರತಾಪ್ ಹಾಗೂ ಸಿಬ್ಬಂದಿ ಬೆಂಬಲದಿಂದ ಅಭಿವೃದ್ದಿಯಲ್ಲಿ ಸಾಧನೆ ಮಾಡುವಂತಾಗಿದೆ ಎಂದರು.
   ಕೈಕೇರಿ ಗ್ರಾಮದಲ್ಲಿ ಆಧುನಿಕ ಶೈಲಿಯ ಗೋದಾಮು ನಿರ್ಮಾಣ, ಹಳೆಯ ಬ್ಯಾಂಕ್ ಕಟ್ಟಡವನ್ನು ದುರಸ್ತಿ ಪಡಿಸಿ ಬಾಡಿಗೆ ನೀಡಲಾಗುವುದು ಎಂದರು.

    ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಜಮ್ಮಡ ಸಿ. ಮೋಹನ್ ಮತ್ತು ಹಾಲಿ ಅಧ್ಯಕ್ಷ ಕುಪ್ಪಂಡ ಎಂ. ಚಿಟ್ಟಿಯಪ್ಪ ಅವರನ್ನು ವಜ್ರ ಮಹೋತ್ಸವ ಹಿನ್ನೆಲೆ ಸನ್ಮಾನಿಸಲಾಯಿತು. ಸಂಘದ ಸ್ಥಾಪನೆ, ಅಭಿವೃದ್ಧಿಯಲ್ಲಿ ತೊಡಗಿಕೊಂಡವರನ್ನು ನೆನಪಿಸಿಕೊಳ್ಳಲಾಯಿತು.

   ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ. ಕೆ. ಪ್ರತಾಪ್ ವರದಿ ಮಂಡಿಸಿದರು. ಉಪಾಧ್ಯಕ್ಷ ಕಬ್ಬಚ್ಚೀರ ಸುಬ್ರಮಣಿ, ನಿರ್ದೇಶಕರಾದ ಜಮ್ಮಡ ಸಿ. ಮೋಹನ್, ಚೆಪ್ಪುಡೀರ ಟಿ. ಗಣಪತಿ, ಕುಲ್ಲಚಂಡ ಪ್ರಮೋದ್ ಗಣಪತಿ, ಕಾಡ್ಯಮಾಡ ಪಿ. ದೇವಯ್ಯ, ಜಮ್ಮಡ ಬಿ. ಪ್ರಮೀಳ, ಜಮ್ಮಡ ಎ. ಸೌಮ್ಯ, ವೇದಪಂಡ ಬಿ. ಕಿರಣ್, ಪಿ. ವಿ. ಶೋಬಿತ್, ಎಚ್. ಎಸ್. ಗಣೇಶ್, ವೈ. ಬಿ. ಗಪ್ಪು ಇದ್ದರು. ದಿವ್ಯಶ್ರೀ ಪ್ರಾರ್ಥಿಸಿದರು. ನಿರ್ದೇಶಕ ಬೆಲ್ಲಚಂಡ ಸಿ ಮಾದಪ್ಪ ವಂದಿಸಿದರು.