ಗೋಣಿಕೊಪ್ಪ: ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕರಿಗೆ ಸನ್ಮಾನ
admincoorgdaily

ಗೋಣಿಕೊಪ್ಪ: ಶಿಕ್ಷಕರ ದಿನಾಚರಣೆ ಅಂಗವಾಗಿ ಗೋಣಿಕೊಪ್ಪ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ವತಿಯಿಂದ ಶಾಲೆಯ ಶಿಕ್ಷಕರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಶಿಕ್ಷಕರಿಗೆ ವಿಶೇಷ ಗೌರವ ಸಲ್ಲಿಸುವ ಉದ್ದೇಶದಿಂದ ಶಾಲೆಯ ದ್ವಾರದಿಂದಲೇ ಭವ್ಯ ಸ್ವಾಗತ ಮೆರವಣಿಗೆ ಆಯೋಜಿಸಲಾಗಿತ್ತು. ಎಸ್‌ಡಿಎಂಸಿ ಸದಸ್ಯರು ಆರತಿ ತಟ್ಟೆ ಹಿಡಿದು ಮೆರವಣಿಗೆಯ ಮುಂಭಾಗದಲ್ಲಿ ಸಾಗಿದರು.
ಶಾಲೆಯ ಲೀಡರ್ಸ್ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದು, ವಿದ್ಯಾರ್ಥಿಗಳು ಶಿಕ್ಷಕರಿಗೆ ಪುಷ್ಪವೃಷ್ಟಿ ಸುರಿಸುತ್ತಾ ವೇದಿಕೆಯತ್ತ ಕರೆತಂದರು. ವೇದಿಕೆಯ ಮುಂಭಾಗದಲ್ಲಿ ಶಿಕ್ಷಕರಿಗೆ ಆರತಿ ಬೆಳಗಿ, ತಿಲಕ ಹಚ್ಚುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಬಳಿಕ ಶಿಕ್ಷಕರನ್ನು ವೇದಿಕೆಯಲ್ಲಿ ನಿಗದಿಪಡಿಸಿದ್ದ ಆಸನಗಳಲ್ಲಿ ಗೌರವಪೂರ್ವಕವಾಗಿ ಆಸೀನರನ್ನಾಗಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಅಧ್ಯಕ್ಷತೆಯಲ್ಲಿ ಡಮರುಗ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್ ಸೇರಿದಂತೆ ಶಿಕ್ಷಕರುಗಳಾದ ಜೋಸ್ಲಿಯ, ಇಂದಿರಾ, ದಮಯಂತಿ, ಅನಿತಾ ಕುಮಾರಿ, ಯಸ್ವಿನಿ, ಅರ್ಷಿಯ, ಕ್ಲೆಮೆಂಟಿನ್, ಸಹನಾ, ಶಾರದಾ, ನಾಗರಾಜು, ಸ್ನೇಹ ಕಾವೇರಮ್ಮ, ಮಂಜುಳಾ, ಸಿದ್ದರಾಜು, ಪೂಜಾ, ಅರ್ಷಿಯ, ಪಾರ್ವತಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್ ಜೋಡುಬೀಟಿ, “ಒಬ್ಬ ಉತ್ತಮ ಶಿಕ್ಷಕನ ಪಾಠ ಮುಗಿದರೂ, ಅವರ ಮಾತು ವಿದ್ಯಾರ್ಥಿಯ ಬದುಕಿನಲ್ಲಿ ಎಂದಿಗೂ ಮುಗಿಯುವುದಿಲ್ಲ. ವರ್ಷಗಳು ಕಳೆದರೂ ಯಾವುದೋ ಒಂದು ಸಂದರ್ಭದಲ್ಲಿ ಶಿಕ್ಷಕರು ಹೇಳಿದ ಮಾತು ನೆನಪಾಗುತ್ತದೆ. ಕಷ್ಟ ಬಂದಾಗ ಅವರ ಧೈರ್ಯದ ಮಾತು ದಾರಿ ತೋರಿಸುತ್ತದೆ. ಸೋಲಿನ ಸಂದರ್ಭದಲ್ಲಿ ಅವರ ನಂಬಿಕೆ ಮತ್ತೆ ಎದ್ದು ನಿಲ್ಲುವ ಶಕ್ತಿ ನೀಡುತ್ತದೆ. ಅದಕ್ಕಾಗಿಯೇ ಶಿಕ್ಷಕರು ಮನುಷ್ಯರನ್ನು ರೂಪಿಸುವ ಮೌನ ಶಿಲ್ಪಿಗಳು. ಅವರು ಕಟ್ಟುವುದು ಕಟ್ಟಡವಲ್ಲ, ಭವಿಷ್ಯ. ಅವರು ಬೆಳೆಸುವುದು ಬೆಳೆಯಲ್ಲ, ಪೀಳಿಗೆ. ಅವರು ಬಿತ್ತುವುದು ಕೇವಲ ಅಕ್ಷರವಲ್ಲ, ಆಲೋಚನೆ” ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಶಿಕ್ಷಕರುಗಳು ಭಾವುಕಾರಾಗಿ ಮಾತನಾಡಿದರು.
ವೇದಿಕೆ ಕಾರ್ಯಕ್ರಮದ ಬಳಿಕ ಶಿಕ್ಷಕರಿಗಾಗಿ ವಿವಿಧ ಮನರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ನೀರು ತುಂಬಿಸುವುದು, ಸೇಬು ಕಚ್ಚುವುದು, ಮಡಕೆ ಒಡೆಯುವುದು, ಪಾಸಿಂಗ್ ದಿ ಬಾಲ್, ಮ್ಯೂಸಿಕಲ್ ಚೇರ್ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಶಿಕ್ಷಕರು ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು.
ನಂತರ ಶಿಕ್ಷಕರಿಗಾಗಿ ವಿಶೇಷ ಭೋಜನಕೂಟ ಏರ್ಪಡಿಸಲಾಗಿತ್ತು.
ಎಸ್‌ಡಿಎಂಸಿ ಉಪಾಧ್ಯಕ್ಷೆ ದಿವ್ಯ ಪ್ರಾರ್ಥನೆ ನೆರವೇರಿಸಿದರು. ಸದಸ್ಯೆ ಗೌರಿ ಸ್ವಾಗತಿಸಿದರು. ಸೌಮ್ಯ ವಂದನಾರ್ಪಣೆ ನೆರವೇರಿಸಿದರು. ಚಂದ್ರಕಲಾ ಕೆ.ಜಿ. ಕಾರ್ಯಕ್ರಮ ನಿರೂಪಿಸಿದರು. ಎಸ್‌ಡಿಎಂಸಿ ಸದಸ್ಯರುಗಳಾದ ಅನಿತಾ, ಕೌಶರ್, ಮಂಜುಳ, ಮೀನ, ರಾಕೇಶ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.