Kodagu

ಗೋಣಿಕೊಪ್ಪ: ಸಂಸ್ಕೃತಿ ಉಳಿಸುವಲ್ಲಿ ಗಣೇಶೋತ್ಸವ ಸಮಿತಿಗಳ ಪಾತ್ರ ಶ್ಲಾಘನೀಯ: ಡಿವೈಎಸ್ಪಿ ಮಹೇಶ್ ಕುಮಾರ್

admincoorgdaily

ಗೋಣಿಕೊಪ್ಪ: ಸಂಸ್ಕೃತಿ ಉಳಿಸುವಲ್ಲಿ ಗಣೇಶೋತ್ಸವ ಸಮಿತಿಗಳ ಪಾತ್ರ ಶ್ಲಾಘನೀಯ: ಡಿವೈಎಸ್ಪಿ ಮಹೇಶ್ ಕುಮಾರ್
ಗೋಣಿಕೊಪ್ಪ: ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮರೆಯುತ್ತಿದ್ದೇವೆ ಎಂಬ ಆತಂಕದ ನಡುವೆಯೂ ಗಣೇಶೋತ್ಸವ ಸಮಿತಿಗಳು ನಮ್ಮ ನೆಲದ ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ವಿರಾಜಪೇಟೆ ಉಪ ಪೊಲೀಸ್ ಅಧೀಕ್ಷಕ ಮಹೇಶ್ ಕುಮಾರ್ ಅಭಿಪ್ರಾಯಪಟ್ಟರು.

ಗೋಣಿಕೊಪ್ಪದ ಒಂದನೇ ವಿಭಾಗದ ಉಮಾಮಹೇಶ್ವರಿ ಬಡಾವಣೆಯ ಪ್ರಸನ್ನ ಗಣಪತಿ ಸೇವಾ ಸಂಘದ ವತಿಯಿಂದ ನಡೆಯುತ್ತಿರುವ 15ನೇ ವರ್ಷದ ಗೌರಿ–ಗಣೇಶೋತ್ಸವದ ನಾಲ್ಕನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಾಗಟೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಗಣೇಶೋತ್ಸವಗಳು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಸಮಾಜದ ಒಗ್ಗಟ್ಟನ್ನು ಬಲಪಡಿಸುವ ವೇದಿಕೆಗಳಾಗುತ್ತಿವೆ. ಇಂತಹ ಸ್ಥಳೀಯ ಸಂಘಟನೆಗಳು ಸಮಾಜದಲ್ಲಿ ಸಂಘಟನಾತ್ಮಕ ಮನೋಭಾವ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಸ್ಥಳೀಯ ಸಾಧಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಮಹೇಶ್ ಕುಮಾರ್, ತಮ್ಮದೇ ಊರಿನಲ್ಲಿ, ತಮ್ಮ ಜನರ ಮಧ್ಯೆ ಸಾಧಕರನ್ನು ಗುರುತಿಸಿ ಗೌರವಿಸುವುದು ಸಂತಸದ ವಿಚಾರ.

 ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ಅವರ ಸಾಧನೆಗೆ ಪ್ರೋತ್ಸಾಹ ನೀಡುವುದರ ಜತೆಗೆ, ಮತ್ತೊಬ್ಬ ವಿದ್ಯಾರ್ಥಿಗೆ ಸಾಧನೆ ಮಾಡುವ ಪ್ರೇರಣೆಯನ್ನೂ ನೀಡಿದಂತಾಗುತ್ತದೆ. ಪ್ರಸನ್ನ ಗಣಪತಿ ಸೇವಾ ಸಂಘ ಇಂತಹ ಹೊಸ ಚಿಂತನೆಗಳೊಂದಿಗೆ ಕಾರ್ಯಕ್ರಮ ಆಯೋಜಿಸಿರುವುದು ಸಾಮಾಜಿಕವಾಗಿ ಶ್ಲಾಘನೀಯ ಎಂದರು.

ಕಾಳೇಗೌಡ ಠಾಣಾಧಿಕಾರಿ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸಂದೇಶವನ್ನು ಸಾರುವ ಸಂಘಟನಾತ್ಮಕ ಮನೋಭಾವ ಪ್ರಸನ್ನ ಯುವಕ ಸಂಘದಲ್ಲಿ ಶಿಸ್ತುಬದ್ಧವಾಗಿ ಕಂಡುಬರುತ್ತಿದೆ. ಸಂಘದ ಕಾರ್ಯವೈಖರಿ ಇತರ ಸಂಘಟನೆಗಳಿಗೂ ಮಾದರಿಯಾಗಿದ್ದು, ಗುಣಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ಪೊನ್ನಂಪೇಟೆ ತಾಲೂಕು ರೆಡ್‌ಕ್ರಾಸ್ ಸಂಸ್ಥೆ ಸಭಾಪತಿ ಬಿ.ಎನ್. ಪ್ರಕಾಶ್ ಮಾತನಾಡಿ, ಉತ್ತಮ ಚಿಂತನೆ ಇದ್ದರೆ ಯಾವುದೇ ಕಾರ್ಯವೂ ಸಕಾರಾತ್ಮಕವಾಗಿ ರೂಪುಗೊಳ್ಳುತ್ತದೆ. ಸಣ್ಣ ವೇದಿಕೆಗಳಿಂದಲೇ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅನೇಕ ಸಾಧಕರ ಉದಾಹರಣೆಗಳಿವೆ. ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿಯರಾದ ಗಿರಿಜಾ, ರಾಘವೇಂದ್ರ, ಲಕ್ಷ್ಮಿ, ಲೀನಾ ರಾಘವೇಂದ್ರ ಹಾಗೂ ಉಮಾ ಅವರನ್ನು ಸನ್ಮಾನಿಸಲಾಯಿತು. ದೈವಾರಾಧನೆಯಲ್ಲಿ ತೊಡಗಿಸಿಕೊಂಡಿರುವ ಭರತ್ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಂಜನಾ ರೈ, ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಚರಣ್ ಸಂಗಪ್ಪ ಅವರನ್ನೂ ಗೌರವಿಸಲಾಯಿತು.
ನಂತರ ಸೈಕ್ಲೋನ್ ನೃತ್ಯ ತಂಡದಿAದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆಶಾ ಮತ್ತು ಮನೋಜ್ ಅವರು 90ರ ದಶಕದ ಜನಪ್ರಿಯ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ವೇದಿಕೆಯಲ್ಲಿ ಪ್ರಸನ್ನ ಯುವಕ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ್, ಉದ್ಯಮಿಗಳಾದ ಚೆನ್ನರೆಡ್ಡಿ ಮತ್ತು ಶಿವಾರೆಡ್ಡಿ, ವೇದಿಕೆ ಸಮಿತಿ ಸಂಚಾಲಕ ಪ್ರಮೋದ್, ಪೂಜಾ ಸಮಿತಿ ಸಂಚಾಲಕ ಮುರಳೀಶ್, ಸಮಿತಿ ಸಂಚಾಲಕಿ ಸೌಜನ್ಯ, ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಕೋಶಾಧಿಕಾರಿ ಅನ್ವಿತಾ, ಉಪಾಧ್ಯಕ್ಷರಾದ ಅನಿಲ್ ಮತ್ತು ದಿಲೀಪ್, ಸದಸ್ಯರಾದ ಕೌಶಿಕ್, ಆಶಾ, ಚಂದ್ರಕಲಾ, ಪ್ರಜ್ವಲ್, ಪುನೀತ್, ಅಜಿತಾ ಸೇರಿದಂತೆ ಹಲವರು ಇದ್ದರು.