Kodagu

ಗೋಣಿಕೊಪ್ಪ; ನಾಳೆ ಪೊನ್ನೋಣಂ-2026

admincoorgdaily

ಗೋಣಿಕೊಪ್ಪ; ನಾಳೆ ಪೊನ್ನೋಣಂ-2026
ಪೊನ್ನಂಪೇಟೆ, ನ. 07: ಗೋಣಿಕೊಪ್ಪ ಕೊಡಗು ಹಿಂದೂ ಮಲಯಾಳಿ ಸಮಾಜದ ವತಿಯಿಂದ ನ.8ರಂದು(ನಾಳೆ) ಪೊನ್ನೋಣಂ–2026 ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಮಾಜದ ಅಧ್ಯಕ್ಷ ಕೆ.ಪಿ. ಪ್ರಶಾಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಗೌರವ ಸಮಾರಂಭಗಳು ನಡೆಯಲಿವೆ ಎಂದು ಸಮಾಜದ ಪ್ರಧಾನ ಕಾರ್ಯದರ್ಶಿ ವಿ.ವಿ. ಅರುಣ್ ಕುಮಾರ್ ತಿಳಿಸಿದ್ದಾರೆ.

ಗೋಣಿಕೊಪ್ಪಲಿನ ಪರಿಮಳ ಮಂಗಳ ವಿಹಾರದಲ್ಲಿ ಅಂದು ಬೆಳಿಗ್ಗೆ 9.30ಕ್ಕೆ ಸಭಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ.

ನಿವೃತ್ತ ಸೈನಿಕ ಕೆ.ಕೆ. ಮೋಹನ್‌ದಾಸ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಎಸ್‌ಎನ್‌ಡಿಪಿ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್, ಕನ್ನಡ ಚಲನಚಿತ್ರ ನಟಿ ನಂಬುಡುಮಾಡ ತಪಸ್ವಿನಿ ಪೂಣಚ್ಚ, ಮಲಯಾಳಂ ಚಲನಚಿತ್ರ ನಟಿ ಪ್ರಿಯಾಂಕ ನಾರಾಯಣ, ಸಾಹಿತಿ ಹಾಗೂ ಸಮಾಜ ಸೇವಕಿ ಪುಷ್ಪಲತಾ ಶಿವಪ್ಪ ಮತ್ತು ಹಿಂದೂ ಮಲಯಾಳಿ ಸಮಾಜದ ಸ್ಥಾಪಕ ಅಧ್ಯಕ್ಷ ಶರತ್‌ಕಾಂತ್ ಪಿ.ಎಸ್. ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಸದಸ್ಯರ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಗುವುದು. ಅಲ್ಲದೆ, ಸಮಾಜದ ಕಳೆದ ಮೂರು ವರ್ಷಗಳ ಕಾರ್ಯಕ್ರಮಗಳ ವಿವರಗಳನ್ನು ಒಳಗೊಂಡ ಪಟ್ಟಿ ಅನಾವರಣಗೊಳ್ಳಲಿದೆ.

ಇದರೊಂದಿಗೆ ಸಮಾಜದ ದಶಕದ ಸಂಭ್ರಮಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಿರುವ ಹತ್ತು ಪ್ರಮುಖ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆಗೊಳಿಸುವುದರ ಜೊತೆಗೆ ದಶಕದ ಸಂಭ್ರಮದ ವಿಶೇಷ ಲಾಂಛನ ಅನಾವರಣ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ ಎಂದು ಅರುಣ್ ಕುಮಾರ್ ತಿಳಿಸಿದ್ದಾರೆ.