ಗೋಣಿಕೊಪ್ಪಲು ದಸರಾದಲ್ಲಿ ನಗೆ ಹಬ್ಬ; ಪ್ರಾಣೇಶ್, ಜೋಶಿ, ಮಹಾಮನಿ ಹಾಸ್ಯಕ್ಕೆ ನಗೆಗಡಲಲ್ಲಿ ತೇಲಿದ ಪ್ರೇಕ್ಷಕರು
admincoorgdaily

ಪೊನ್ನಂಪೇಟೆ, ಅ.18: ನಿತ್ಯದ ಬದುಕಿನ ಜಂಜಾಟ, ಒತ್ತಡ ಹಾಗೂ ಆತಂಕಗಳ ನಡುವೆ ಒಂದಷ್ಟು ಹೊತ್ತು ಮನಬಿಚ್ಚಿ ನಗುವ ಅವಕಾಶ ಸಿಕ್ಕರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ. ಇಂತಹ ನಗೆಮಯ ವಾತಾವರಣಕ್ಕೆ ಸಾಕ್ಷಿಯಾದದ್ದು ಗೋಣಿಕೊಪ್ಪಲಿನ 48ನೇ ವರ್ಷದ ಶ್ರೀ ಕಾವೇರಿ ದಸರಾ ಜನೋತ್ಸವದ ಏಳನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ.
ಕನ್ನಡದ ಖ್ಯಾತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್, ಗಂಗಾವತಿಯ ನರಸಿಂಹ ಜೋಶಿ ಹಾಗೂ ಯಾದಗಿರಿಯ ಬಸವರಾಜ್ ಮಹಾಮನಿ ಅವರ ಹಾಸ್ಯ ಸಂಜೆ ಸ್ಟ್ಯಾಂಡ್ಅಪ್ ಕಾಮಿಡಿ ಕಾರ್ಯಕ್ರಮ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಕಲಾವಿದರು ತಮ್ಮ ಮಾತಿನ ವೈಖರಿ, ಹಾಸ್ಯಪ್ರಜ್ಞೆ ಹಾಗೂ ಸಮಯೋಚಿತ ಹಾಸ್ಯದ ಮೂಲಕ ಸಭಿಕರನ್ನು ರಂಜಿಸಿದರು. ಕಲಾವೇದಿಕೆಯಲ್ಲಿ ಮೊಳಗಿದ ನಗೆಯ ಅಲೆಗಳು ಕಾರ್ಯಕ್ರಮದ ಉತ್ಸಾಹವನ್ನು ಇಮ್ಮಡಿಗೊಳಿಸಿದವು.
ಕನ್ನಡದ ಜನಪ್ರಿಯ ಹಾಸ್ಯ ಪರಂಪರೆಯನ್ನು ತಮ್ಮದೇ ಆದ ಶೈಲಿಯಲ್ಲಿ ಮುಂದುವರಿಸಿಕೊಂಡು ಬಂದಿರುವ ಆಧುನಿಕ ಬೀಚಿ ಎಂದೇ ಖ್ಯಾತಿವೆತ್ತ ಗಂಗಾವತಿ ಪ್ರಾಣೇಶ್ ಅವರು ಎರಡನೇ ಬಾರಿಗೆ ಗೋಣಿಕೊಪ್ಪಕ್ಕೆ ಬಂದಿದ್ದು ವಿಶೇಷವಾಗಿತ್ತು. ದೈನಂದಿನ ಬದುಕಿನ ಸನ್ನಿವೇಶಗಳು, ಸಾಮಾಜಿಕ ವಿದ್ಯಮಾನಗಳು ಹಾಗೂ ಮಾನವ ಸ್ವಭಾವದ ವಿವಿಧ ಮುಖಗಳನ್ನು ಹಾಸ್ಯದ ಮೂಲಕ ತೆರೆದಿಟ್ಟರು. ಅವರ ಮಾತಿನಲ್ಲಿದ್ದ ಹಾಸ್ಯದ ಮೊನಚು ಮತ್ತು ಸಹಜ ಅಭಿವ್ಯಕ್ತಿ ಪ್ರೇಕ್ಷಕರನ್ನು ಸೆಳೆಯಿತು.
ನರಸಿಂಹ ಜೋಶಿ ಅವರು ನರೇಂದ್ರ ಮೋದಿ, ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ ಮುಂತಾದವರ ಧ್ವನಿ ಅನುಕರಣೆ ಮೂಲಕ ಮಿಮಿಕ್ರಿ, ಹಾಡಿನ ಮೂಲಕ ಹಾಸ್ಯ,ಚುರುಕಾದ ಸಂಭಾಷಣೆ ಹಾಗೂ ಹಾಸ್ಯಮಯ ನಿರೂಪಣೆಯ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಸಾಮಾನ್ಯ ಸಂಗತಿಗಳಲ್ಲಿಯೂ ಹಾಸ್ಯವನ್ನು ಕಂಡುಕೊಳ್ಳುವ ಅವರ ಶೈಲಿ ಸಭಿಕರಲ್ಲಿ ನಗೆಯ ಹೊನಲನ್ನೇ ಹರಿಸಿತು.
ಬಸವರಾಜ್ ಮಹಾಮನಿ ಅವರ ಉತ್ತರ ಭಾರತ ಕನ್ನಡದ ಹಾಸ್ಯಮಯ ಪ್ರಸ್ತುತಿಯೂ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತಂದಿತು. ಮಾತಿನ ಲವಲವಿಕೆ, ಸನ್ನಿವೇಶಕ್ಕೆ ತಕ್ಕ ಹಾಸ್ಯ ನೆರೆದಿದ್ದ ನೂರಾರು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸಿದರು.
ಮೂವರು ಹಾಸ್ಯ ಕಲಾವಿದರ ವಿಭಿನ್ನ ಶೈಲಿಗಳು ಒಂದೇ ವೇದಿಕೆಯಲ್ಲಿ ಅನಾವರಣಗೊಂಡಾಗ ಪ್ರೇಕ್ಷಕರಿಗೆ ನಗೆಯ ರಸದೌತಣವೇ ದೊರೆಯಿತು. ಕಲಾವಿದರ ಹಾಸ್ಯಕ್ಕೆ ಸಭಿಕರಿಂದ ನಿರಂತರ ಚಪ್ಪಾಳೆ ಹಾಗೂ ನಗೆಯ ಪ್ರತಿಕ್ರಿಯೆ ವ್ಯಕ್ತವಾಯಿತು. ಗಂಭೀರ ವಿಚಾರಗಳನ್ನೂ ಹಾಸ್ಯದ ಮೂಲಕ ಸರಳವಾಗಿ ಹೇಳುವ ಕಲಾವಿದರ ಕೌಶಲ್ಯ ಕಾರ್ಯಕ್ರಮದ ವಿಶೇಷತೆಯಾಗಿತ್ತು. ಒಟ್ಟಿನಲ್ಲಿ, ಗಂಗಾವತಿ ಪ್ರಾಣೇಶ್, ನರಸಿಂಹ ಜೋಶಿ ಹಾಗೂ ಬಸವರಾಜ್ ಮಹಾಮನಿ ಅವರ ಸ್ಟ್ಯಾಂಡ್ಅಪ್ ಕಾಮಿಡಿ ಪ್ರದರ್ಶನವು ಗೋಣಿಕೊಪ್ಪ ದಸರಾ ಜನೋತ್ಸವದ ಏಳನೇ ದಿನಕ್ಕೆ ನಗೆಯ ಮೆರುಗು ನೀಡಿತು.
ಇದಕ್ಕೂ ಮುನ್ನ ದಿನದ ಅಂಗವಾಗಿ ವೆಸ್ಟರ್ನ್ ಡಾನ್ಸ್ - ಐಕಿಯಾ ಏಮ್ ಹೈ ಡಾನ್ಸ್ ಸ್ಟುಡಿಯೋ ಮತ್ತು ವಿರಾಜಪೇಟೆಯ ಇಂಟೋಪೀಸ್ ಡಾನ್ಸ್ ಟೀಂ ಹಾಗೂ ಸುಳ್ಯ ಬೆಳ್ಳಾರೆಯ ಡಾನ್ಸ್ & ಬೀಟ್ಸ್ ತಂಡದಿಂದ ನೃತ್ಯ ಪ್ರದರ್ಶನ ಹಾಗೂ ಖ್ಯಾತ ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಅವರಿಂದ ಜಾನಪದ ಸಂಜೆ ಕಾರ್ಯಕ್ರಮ ನೆರೆದಿದ್ದವರಿಗೆ ರಸದೌತಣ ನೀಡಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಜಿಲ್ಲಾಡಳಿತ ಹಾಗೂ ಶ್ರೀ ಕಾವೇರಿ ದಸರಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ 48ನೇ ವರ್ಷದ ಶ್ರೀ ಕಾವೇರಿ ದಸರಾ ಜನೋತ್ಸವವು ಧಾರ್ಮಿಕ ಆಚರಣೆಗಳ ಜೊತೆಗೆ ಸಾಹಿತ್ಯ, ಸಂಗೀತ, ನೃತ್ಯ ಹಾಗೂ ಹಾಸ್ಯ ಕಾರ್ಯಕ್ರಮಗಳ ಮೂಲಕವೂ ಜನರನ್ನು ಆಕರ್ಷಿಸುತ್ತಿದೆ. ದಿನಾಂಕ 18 (ಇಂದು)ರಂದು ಕನ್ನಡ ಚಿತ್ರರಂಗದ ಅದ್ಭುತ ಯುವ ಗಾಯಕ ಸಂಜಿತ್ ಹೆಗ್ಡೆ ಅವರ ಗಾಯನ ಕಾರ್ಯಕ್ರಮ ಯುವಜನತೆಯ ಹೃದಯ ಗೆಲ್ಲಲಿದೆ.