ಗೋಣಿಕೊಪ್ಪಲು: ಕಾವೇರಿ ಪಿ.ಯು. ಕಾಲೇಜಿನಲ್ಲಿ ಪೋಷಕ-ಶಿಕ್ಷಕ ಸಭೆ
admincoorgdaily

ಗೋಣಿಕೊಪ್ಪಲು : ಗೋಣಿಕೊಪ್ಪಲಿನ ಕಾವೇರಿ ಪಿ.ಯು. ಕಾಲೇಜಿನಲ್ಲಿ 2026-27ನೇ ಸಾಲಿನ ಪೋಷಕ-ಶಿಕ್ಷಕ ಸಭೆಯು ಕಾಲೇಜಿನ ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿತು.
ಗೋಣಿಕೊಪ್ಪ ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕಿ ಪಿ. ವಾಣಿ ಚೆಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಎನ್ಡಿಎ, ಎಎಫ್ಸಿಎಟಿ, ಸಿಡಿಎಸ್, ಎಸ್ಎಸ್ಬಿ, ಸಿಜಿಎಲ್, ಐಬಿಪಿಎಸ್ ತರಬೇತುದಾರರಾದ ಚೊಟ್ಟೆಕಾಳಪಂಡ ಪೃಥ್ವಿ ಉತ್ತಯ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಕೇವಲ ಊಹಾಪೋಹದ ಮೂಲಕ ಉತ್ತರಗಳನ್ನು ಗುರುತಿಸುವುದರಿಂದ ಸಾಧ್ಯವಿಲ್ಲ. ನಿರಂತರ ಅಧ್ಯಯನ, ಕಠಿಣ ಪರಿಶ್ರಮ, ಶಿಸ್ತು ಹಾಗೂ ಸೂಕ್ತ ಮಾರ್ಗದರ್ಶನ ಅತ್ಯಗತ್ಯ. ಈ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನು ತಯಾರುಗೊಳಿಸಬೇಕು ಎಂದು ಅವರು ಪೋಷಕರಿಗೆ ಕರೆ ನೀಡಿದರು.
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪ್ರತಿವರ್ಷ ಸುಮಾರು ಒಂದೂವರೆ ಲಕ್ಷ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ. ಅದರಲ್ಲಿ ಕ್ಲಾಸ್-1 ಮತ್ತು ಉನ್ನತ ಹುದ್ದೆಗಳು ಸೇರಿದಂತೆ ಸುಮಾರು 20 ಸಾವಿರ ಹುದ್ದೆಗಳು, ಕ್ಲಾಸ್-2 ವಿಭಾಗದಲ್ಲಿ 30ರಿಂದ 35 ಸಾವಿರ ಹುದ್ದೆಗಳು ಹಾಗೂ ಉಳಿದಂತೆ ಗ್ರೂಪ್-ಸಿ ಮತ್ತು ಇತರ ವಿಭಾಗಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಇರುತ್ತವೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರಿ ಉದ್ಯೋಗಗಳ ನೇಮಕಾತಿ ಪರೀಕ್ಷೆಗಳಲ್ಲಿ ಮುಖ್ಯವಾಗಿ ಇಂಗ್ಲಿಷ್, ಗಣಿತ, ಸಾಮಾನ್ಯ ಜ್ಞಾನ ಹಾಗೂ ತಾರ್ಕಿಕ ಚಿಂತನೆ ವಿಷಯಗಳಿಗೆ ಆದ್ಯತೆ ನೀಡಲಾಗುತ್ತದೆ. ಈ ವಿಷಯಗಳು ಸಾಮಾನ್ಯವಾಗಿ ಹತ್ತನೇ ತರಗತಿಯ ಮಟ್ಟದಲ್ಲಿರುವುದರಿಂದ, ಹತ್ತನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು ಸರಿಯಾದ ಮಾರ್ಗದರ್ಶನ ಮತ್ತು ನಿರಂತರ ಅಭ್ಯಾಸದ ಮೂಲಕ ಪರೀಕ್ಷೆಗಳನ್ನು ಎದುರಿಸಬಹುದು ಎಂದು ಹೇಳಿದರು.
ಕೇಂದ್ರ ಸರ್ಕಾರಿ ಹುದ್ದೆಗಳಲ್ಲಿ ಕನಿಷ್ಠ ವೇತನದ ಹುದ್ದೆಗಳಲ್ಲಿಯೂ ಉತ್ತಮ ಸಂಬಳ ದೊರೆಯುತ್ತದೆ. ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ ಸುಮಾರು 35 ಸಾವಿರ ರೂ.ಗಳಿಂದ ಆರಂಭವಾಗುವ ವೇತನವಿದ್ದರೆ, ಪ್ರಥಮ ದರ್ಜೆ ಅಧಿಕಾರಿಗಳ ಹುದ್ದೆಗಳಲ್ಲಿ ಸುಮಾರು 1.20 ಲಕ್ಷದಿಂದ 1.30 ಲಕ್ಷ ರೂ.ಗಳವರೆಗೆ ಇರಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮತ್ತು ಯುವಜನರು ಸರ್ಕಾರಿ ಉದ್ಯೋಗಗಳ ಬಗ್ಗೆ ಕೀಳರಿಮೆ ಹೊಂದದೆ, ಲಭ್ಯವಿರುವ ಅವಕಾಶಗಳ ಬಗ್ಗೆ ಮಾಹಿತಿ ಪಡೆದು ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು. ಕಠಿಣ ಪರಿಶ್ರಮ ಮತ್ತು ಸಮರ್ಪಕ ತರಬೇತಿಯೇ ಪ್ರಮುಖವಾಗಿವೆ. ಆದ್ದರಿಂದ ಪೋಷಕರು ಈ ಬಗ್ಗೆ ಗಮನ ಹರಿಸಬೇಕು ಎಂದರು.
ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಪೋಷಕರು ಮತ್ತು ಶಿಕ್ಷಕರ ನಡುವಿನ ಸಮನ್ವಯದ ಮಹತ್ವದ ಬಗ್ಗೆ ತಿಳಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಸಂತೋಷ್ ಎಂ.ಟಿ. ಕ್ರೀಡಾ ವರದಿ ಮಂಡಿಸಿದರು.
ಪೋಷಕರು ಶಿಕ್ಷಕರಿಂದ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಮಾಹಿತಿ ಪಡೆದರು
ಕಾರ್ಯಕ್ರಮದ ಆರಂಭದಲ್ಲಿ ಯಶಿಕಾ ಹಾಗೂ ಹರ್ಷಿತಾ ಪ್ರಾರ್ಥನಾ ನೃತ್ಯ ಮಾಡಿದರು.
ಈ ಸಂದರ್ಭ ಪೋಷಕ- ಶಿಕ್ಷಕರ ಸಂಘದ ಕಾರ್ಯದರ್ಶಿ ರೇಷ್ಮ,
ಪಿಟಿಎ ಸಂಚಾಲಕ ಡಾ. ಲೆಫ್ಟಿನೆಂಟ್ ಅಕ್ರಂ ಎಂ.ಆರ್,ವಿದ್ಯಾರ್ಥಿ ಸಲಹಾ ಸಮಿತಿಯ ಸಂಚಾಲಕಿ ವಿಪ್ರ ನೀಲಮ್ಮ ಇದ್ದರು. ಕುಸುಮ್ ಕೆ.ಎಂ. ಅತಿಥಿಗಳನ್ನು ಪರಿಚಯಿಸಿದರು. ಜಶ್ಮಿ ಹಾಗೂ ಕರೀಷ್ಮ ಸುಧೀರ್ ನಿರೂಪಿಸಿದರು.