Kodagu

ನಗರದ ವಸತಿ ರಹಿತರಿಗೆ ಗುಡ್ ನ್ಯೂಸ್: ಪ್ರಧಾನಮಂತ್ರಿ ಆವಾಸ್ ಯೋಜನೆ 2.0 ಅಡಿ ಅರ್ಜಿ ಆಹ್ವಾನ

admincoorgdaily

ನಗರದ ವಸತಿ ರಹಿತರಿಗೆ ಗುಡ್ ನ್ಯೂಸ್: ಪ್ರಧಾನಮಂತ್ರಿ ಆವಾಸ್ ಯೋಜನೆ 2.0 ಅಡಿ ಅರ್ಜಿ ಆಹ್ವಾನ

ಮಡಿಕೇರಿ:-ರಾಜ್ಯ ಸರ್ಕಾರದ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಮೂಲಕ ಪ್ರಧಾನಮಂತ್ರಿ ಆವಾಸ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆ(ನಗರ) 2.0 ಅಡಿಯಲ್ಲಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ವಸತಿ ರಹಿತ(ನಿವೇಶನ/ ಕಚ್ಚಾ ಮನೆ ಹೊಂದಿರುವ) ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರದ https/pmay.urban.gov.in        ಪೋರ್ಟಲ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. 

ಜಿಲ್ಲೆಯ ನಗರಸಭೆ, ಮಡಿಕೇರಿ, ಪುರಸಭೆ ಕುಶಾಲನಗರ ಮತ್ತು ವಿರಾಜಪೇಟೆ ಹಾಗೂ ಪಟ್ಟಣ ಪಂಚಾಯಿತಿ ಸೋಮವಾರಪೇಟೆ ಮತ್ತು ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಇದುವರೆಗೂ ಯಾವುದೇ ವಸತಿ ಯೋಜನೆಗಳ ಸೌಲಭ್ಯ ಪಡೆಯದೇ ಇರುವ ಕುಟುಂಬದ ಮುಖ್ಯಸ್ಥ ಮಹಿಳೆಯರು, ಹಿರಿಯ ನಾಗರಿಕರು, ವಿಧುರರು, ವಿಶೇಷ ಚೇತನರು ಹಾಗೂ ಮಾಜಿ ಸೈನಿಕರುಗಳು ಬಿಎಲ್‍ಸಿ ಘಟಕದಡಿ-ನಿವೇಶನ/ ಕಚ್ಚಾ ಮನೆ ಹೊಂದಿರುವ ವಸತಿ ರಹಿತರು ಹೊಸ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನ ಪಡೆಯಲು, 
ಎಎಚ್‍ಪಿ ಘಟಕದಡಿ-ನಿವೇಶನ ರಹಿತರು, ಐಎಸ್‍ಎಸ್ ಘಟಕದಡಿ ವಸತಿ ನಿರ್ಮಾಣದ ಬ್ಯಾಂಕಿಂಗ್ ಸಾಲದಲ್ಲಿ ಬಡ್ಡಿ ಸಬ್ಸಿಡಿ ಸೌಲಭ್ಯ ಪಡೆಯಲು ಅವಕಾಶವಿದ್ದು, ಎಲ್ಲಾ ವಸತಿ ರಹಿತ ಹಾಗೂ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ (ವಿಶೇಷವಾಗಿ ಸಪಾಯಿ ಕರ್ಮಚಾರಿಗಳು, ಬೀದಿ ಬದಿ ವ್ಯಾಪಾರಿಗಳು, ಪಿ.ಎಂ. ವಿಶ್ವಕರ್ಮ ಯೋಜನೆಯ ಫಲಾನುಭವಿಗಳು, ಕಟ್ಟಡ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು ಮತ್ತು ಕೊಳಚೆ ಪ್ರದೇಶ ನಿವಾಸಿಗಳು ಸೇರಿದಂತೆ) ವಸತಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಹಾಗೂ ಅರ್ಜಿದಾರರು ನಿಗದಿತ ನಮೂನೆಯಲ್ಲಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ವಸತಿ ಶಾಖೆಗೆ ಅರ್ಜಿದಾರರ ಫೋಟೋ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಓಟರ್ ಐಡಿ, ಬ್ಯಾಂಕ್ ಪಾಸ್ ಪುಸ್ತಕ, ಕುಟುಂಬದವರ ಆಧಾರ್ ಕಾರ್ಡ್ ಹಾಗೂ ನಿವೇಶನ ಅಥವಾ ಕಚ್ಚಾ ಮನೆಯ ದಾಖಲೆಗಳನ್ನು ಸಲ್ಲಿಸಲು ತಿಳಿಸಿದೆ. 
ಹೆಚ್ಚಿನ ಮಾಹಿತಿಗೆ ಆಯಾಯ ನಗರ ಸ್ಥಳೀಯ ಸಂಸ್ಥೆಗಳ ವಸತಿ ಶಾಖೆಯನ್ನು ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಿಎಲ್‍ಟಿಸಿ ಕೋಶವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಂಜುನಾಥ್ ರಾಮಣ್ಣ ಅವರು ತಿಳಿಸಿದ್ದಾರೆ.