Kodagu

ಗೂಡ್ಸ್ ವಾಹನ–ಓಮಿನಿ ಕಾರು ನಡುವೆ ಡಿಕ್ಕಿ: ಇಬ್ಬರಿಗೆ ಗಾಯ

admincoorgdaily

ಗೂಡ್ಸ್ ವಾಹನ–ಓಮಿನಿ ಕಾರು ನಡುವೆ ಡಿಕ್ಕಿ: ಇಬ್ಬರಿಗೆ ಗಾಯ
ಸಿದ್ದಾಪುರ: 
ವೇಗವಾಗಿ ಬಂದ ಗೂಡ್ಸ್ ವಾಹನವೊಂದು ಓಮಿನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದ ವೈನ್ ಶಾಪ್ ಸಮೀಪ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಚೆನ್ನಂಗಿ ಗ್ರಾಮದ ಚೊಟ್ಟೆಪಾರೆ ಹಾಡಿ ನಿವಾಸಿ ಜೆ.ಕೆ. ರಾಮು (65) ಹಾಗೂ ಮಾಲ್ದಾರೆ ಗ್ರಾಮದ ಇಂದಿರಾ ಜೆ.ಆರ್. (46) ಗಾಯಗೊಂಡವರು.

ರಾಮು ಅವರು ತಮ್ಮ ಸಂಬಂಧಿಕರಾದ ಇಂದಿರಾ ಅವರೊಂದಿಗೆ ಮಾರುತಿ ಓಮಿನಿ ಕಾರಿನಲ್ಲಿ (ಕೆಎ-12-ಪಿ-5901) ಮಾಲ್ದಾರೆಯಿಂದ ಸಿದ್ದಾಪುರ ಮಾರ್ಗವಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಪಿರಿಯಾಪಟ್ಟಣ ಕಡೆಯಿಂದ ಬರುತ್ತಿದ್ದ ಟಾಟಾ ಇಂಟ್ರಾ ಗೂಡ್ಸ್ ವಾಹನ (ಕೆಎ-21-ಸಿ-1920) ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಪಘಾತದಲ್ಲಿ ರಾಮು ಅವರ ಸೊಂಟ, ಎಡಗಾಲು ಹಾಗೂ ಎಡಗೈ ಬೆರಳಿಗೆ ಗಾಯಗಳಾಗಿದ್ದು, ಇಂದಿರಾ ಅವರ ಸೊಂಟ ಮತ್ತು ಬಲಗೈಗೆ ಗಾಯಗಳಾಗಿವೆ. ಗಾಯಾಳುಗಳನ್ನು ಗೂಡ್ಸ್ ವಾಹನದ ಚಾಲಕ ಅಜಿನಾಸ್ ಹಾಗೂ ಆತನ ಸ್ನೇಹಿತರು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಈ ಸಂಬಂಧ ರಾಮು ಅವರು ನೀಡಿದ ದೂರಿನ ಮೇರೆಗೆ ಗೂಡ್ಸ್ ವಾಹನದ ಚಾಲಕ ಅಜಿನಾಸ್ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣಾ ಮೊ.ಸಂ. 101/2026, ಬಿಎನ್‌ಎಸ್ ಕಾಯ್ದೆ 2023ರ ಕಲಂ 281 ಮತ್ತು 125(ಎ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.