State News

ಗ್ರಾ.ಪಂ ಮೀಸಲು ನಿಗದಿ ಪೂರ್ಣ:ಚುನಾವಣೆ ನಡೆಸುವ ಹೊಣೆಗಾರಿಕೆ ಚುನಾವಣಾ ಆಯೋಗದ್ದು, ರಾಜ್ಯ ಸರ್ಕಾರ ಹೈಕೋರ್ಟ್‌ ನಲ್ಲಿ ವಾದ

admincoorgdaily

ಗ್ರಾ.ಪಂ ಮೀಸಲು ನಿಗದಿ ಪೂರ್ಣ:ಚುನಾವಣೆ ನಡೆಸುವ ಹೊಣೆಗಾರಿಕೆ ಚುನಾವಣಾ ಆಯೋಗದ್ದು, ರಾಜ್ಯ ಸರ್ಕಾರ ಹೈಕೋರ್ಟ್‌ ನಲ್ಲಿ ವಾದ
(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಬೆಂಗಳೂರು: ರಾಜ್ಯದ 5,864 ಗ್ರಾಮ ಪಂಚಾಯಿತಿಗಳ ವಾರ್ಡ್ ಪುನರ್ ವಿಂಗಡನೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ, ಇನ್ನು ಚುನಾವಣೆ ನಡೆಸುವ ಹೊಣೆಗಾರಿಕೆ ಚುನಾವಣಾ ಆಯೋಗದ್ದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿದೆ.

ಮೀಸಲು ನಿಗದಿಪಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಚುನಾವಣಾ ಆಯೋಗವೇ ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ವೇಳೆ ಸರ್ಕಾರ ಈ ಮಾಹಿತಿ ನೀಡಿದೆ. ನ್ಯಾ. ಅನು ಸಿವರಾಮನ್ ಮತ್ತು ನ್ಯಾ. ಟಿ.ಪಿ. ವಿವೇಕಾನಂದ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸರ್ಕಾರದ ಕಡೆಯಿಂದ ಆಗಬೇಕಾದ ಎಲ್ಲಾ ಕಾರ್ಯಗಳು ಮುಗಿದಿವೆ, ಆಯೋಗದ ಕೆಲಸ ಮಾತ್ರ ಬಾಕಿಯಿದೆ. ಹೀಗಾಗಿ ಈ ಅರ್ಜಿಯು ಸಿಂಧುತ್ವ ಕಳೆದುಕೊಂಡಿದೆ ಎಂದು ಸರ್ಕಾರದ ಪರ ಎಜಿ ಪ್ರತಿಮಾ ಹೊನ್ನಾಪುರ ವಾದ ಮಂಡಿಸಿದರು.

ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ಬೇಕು ಎಂದು ಆಯೋಗದ ಪರ ವಕೀಲರು ಕೋರಿದ ಹಿನ್ನೆಲೆಯಲ್ಲಿ ಪೀಠವು ವಿಚಾರಣೆಯನ್ನು ಸೆ.17ಕ್ಕೆ ಮುಂದೂಡಿದೆ.

 ರಾಜ್ಯದ 5,864 ಗ್ರಾಮ ಪಂಚಾಯಿತಿಗಳ ಮೀಸಲು ನಿಗದಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಚುನಾವಣೆಗೆ ದಾರಿ ಸುಗಮವಾಗಿದೆ. ಆದರೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕರಡು ಮಾರ್ಗಸೂಚಿ ಇನ್ನೂ ಹೊರಬಿದ್ದಿಲ್ಲ. ಗ್ರಾ.ಪಂ. ಕುರಿತ ಪಿಐಎಲ್ ವಿಚಾರಣೆ ಸೆ.17ಕ್ಕೆ ಮತ್ತು ನಗರ ಸಂಸ್ಥೆಗಳ ಅರ್ಜಿ ವಿಚಾರಣೆ ಸೆ.29ಕ್ಕೆ ಹೈಕೋರ್ಟ್ ಮುಂದೂಡಿದೆ.