ಪುಟಾಣಿನಗರದಲ್ಲಿ ಅದ್ಧೂರಿ ಗಣೇಶ ವಿಸರ್ಜನಾ ಮಹೋತ್ಸವ; ಏಳು ದಿನಗಳ ಪೂಜೆ, ಸಂಭ್ರಮಕ್ಕೆ ವರ್ಣರಂಜಿತ ತೆರೆ
admincoorgdaily

ಮಡಿಕೇರಿ:- ಮಡಿಕೇರಿ ನಗರದ ಪುಟಾಣಿನಗರದಲ್ಲಿ ಕಳೆದ ಏಳು ದಿನಗಳಿಂದ ಭಕ್ತಿ, ಸಂಭ್ರಮ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದ ಶ್ರೀ ಉದ್ಭವ ವಿನಾಯಕ ಸೇವಾ ಸಮಿತಿಯ ಗಣೇಶೋತ್ಸವಕ್ಕೆ ಇಂದು ಅದ್ಧೂರಿ ತೆರೆ ಬಿದ್ದಿದೆ.
ವಿಶೇಷ ಪೂಜೆ, ಅನ್ನಸಂತರ್ಪಣೆ ಬಳಿಕ ನಡೆದ ಗಣೇಶ ಮೂರ್ತಿಯ ಮೆರವಣಿಗೆಯಲ್ಲಿ ಯುವಕ-ಯುವತಿಯರ ಉತ್ಸಾಹ ಮುಗಿಲು ಮುಟ್ಟಿತ್ತು. ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಯುವ ಸಮೂಹದ ಸಂಭ್ರಮದ ನಡುವೆ ಗಣಪತಿ ಮೂರ್ತಿಯನ್ನು ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಹೌದು ಕಳೆದ ಏಳು ದಿನಗಳ ಕಾಲ ಪುಟಾಣಿನಗರದಲ್ಲಿ ಭಕ್ತಿ ಮತ್ತು ಸಂಭ್ರಮದ ವಾತಾವರಣ..ಮನೆ ಮಾಡಿತು. ಶ್ರೀ ಉದ್ಭವ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿಗೆ ಪ್ರತಿದಿನ ವಿಶೇಷ ಪೂಜೆ-ಪುರಸ್ಕಾರ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದೀಗ ಏಳು ದಿನಗಳ ಸಂಭ್ರಮಕ್ಕೆ ವಿದಾಯ ಹೇಳುವ ಸಮಯ. ಪುಟಾಣಿನಗರದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಭಕ್ತರು ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಸಲಾಯಿತು.
ನಂತರ ಆರಂಭವಾಯ್ತು ಅದ್ಧೂರಿ ಮೆರವಣಿಗೆ... ಏರಿಯಾದ ಯುವಕರೇ ನಿರ್ಮಿಸಿದ್ದ ಬೃಹತ್ ಮಂಟಪದಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆ ಸಾಗುತ್ತಿದ್ದಂತೆ ಡಿಜೆ ಹಾಡುಗಳಿಗೆ ಯುವಕ-ಯುವತಿಯರು ಹೆಜ್ಜೆ ಹಾಕಿದರು.ಬಣ್ಣಬಣ್ಣದ ಬೆಳಕು, ಡಿಜೆ ಸೌಂಡ್, ಕುಣಿಯುತ್ತಿದ್ದ ಯುವ ಸಮೂಹ... ಒಂದೆಡೆ ಭಕ್ತಿಯ ಸಂಭ್ರಮವಾದರೆ, ಮತ್ತೊಂದೆಡೆ ಯುವಕರ ನೃತ್ಯ ಮೆರವಣಿಗೆಗೆ ಮತ್ತಷ್ಟು ಕಳೆ ತಂದಿತ್ತು. ಗಣಪತಿ ಬಪ್ಪಾ ಮೋರಿಯಾ ಎಂಬ ಘೋಷಣೆಗಳ ನಡುವೆ ಸಾಗಿದ ಮೆರವಣಿಗೆ ಅಂತಿಮವಾಗಿ ಗೌರಿ ಕೆರೆಯತ್ತ ಸಾಗಿತು.
ಪೂಜೆ... ಅನ್ನಸಂತರ್ಪಣೆ... ಅದ್ಧೂರಿ ಮೆರವಣಿಗೆ...
ಏಳು ದಿನಗಳ ಕಾಲ ಭಕ್ತರ ಮನಸೂರೆಗೊಂಡಿದ್ದ ಉದ್ಭವ ವಿನಾಯಕನಿಗೆ ಭಕ್ತಿಭಾವದ ವಿದಾಯ.
ಗೌರಿ ಕೆರೆಯಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡುವ ಮೂಲಕ ಈ ಬಾರಿಯ ಗಣೇಶೋತ್ಸವಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು.