ಸಿದ್ದಾಪುರದಲ್ಲಿ ನೂತನ ಆಟೋ ತಂಗುದಾಣಕ್ಕೆ ಭೂಮಿಪೂಜೆ
admincoorgdaily

ಸಿದ್ದಾಪುರ; ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಆಟೋ ತಂಗುದಾಣಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಅನುದಾನದಲ್ಲಿ ಇಂದು ಭೂಮಿಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು, ಈ ಭಾಗದ ಬಹುತೇಕ ಜನರು ದಿನಗೂಲಿ ಕೆಲಸಕ್ಕೆ ತೆರಳುವವರಾಗಿದ್ದು, ಅವರ ಸಂಚಾರಕ್ಕೆ ಆಟೋರಿಕ್ಷಾಗಳೇ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿವೆ. ಆಟೋರಿಕ್ಷಾ ಮಾಲೀಕರು ಹಾಗೂ ಚಾಲಕರು ಕೇವಲ ತಮ್ಮ ದುಡಿಮೆಯನ್ನಷ್ಟೇ ಅವಲಂಬಿಸದೆ, ಜನಸೇವೆಯ ಮನೋಭಾವದೊಂದಿಗೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಅಂತಹ ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರಿಗೆ ಸುಸಜ್ಜಿತವಾದ ನಿಲ್ದಾಣವನ್ನು ನಿರ್ಮಿಸಿಕೊಡುವುದು ತಮ್ಮ ಉದ್ದೇಶವಾಗಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಹಾಗೂ ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಜನರನ್ನು ಸುರಕ್ಷಿತವಾಗಿ ತಮ್ಮ ಗಮ್ಯಸ್ಥಾನಗಳಿಗೆ ತಲುಪಿಸುವುದರ ಜೊತೆಗೆ, ವಿವಿಧ ಸಂದರ್ಭಗಳಲ್ಲಿ ಸಾಮಾಜಿಕ ಕಳಕಳಿಯನ್ನೂ ಆಟೋರಿಕ್ಷಾ ಚಾಲಕರು ಪ್ರದರ್ಶಿಸಿರುವುದನ್ನು ನಾವು ಕಂಡಿದ್ದೇವೆ. ಅಂತಹ ಸೇವಾ ಮನೋಭಾವದ ಚಾಲಕರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವುದು ಸಂತಸದ ಹಾಗೂ ಹೆಮ್ಮೆಯ ವಿಷಯ ಎಂದು ಮಾನ್ಯ ಶಾಸಕರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ವಲಯ ಅಧ್ಯಕ್ಷರಾದ ಪ್ರತೀಶ್, ಕಾವೇರಿ ಜಲಾನಯನ ಮಂಡಳಿಯ ನಿರ್ದೇಶಕರಾದ ಸೂರಜ್ ಹೊಸೂರು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪಿ ವಿ ಜಾನ್ಸನ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಹನೀಫ್, ತಾಲೂಕು ಘಟಕದ ಅಧ್ಯಕ್ಷರು ರಫೀಕ್, ತಾಲೂಕು ಪಂಚಾಯತ್ ಮಾಜಿ ಸದಸ್ಯರು ಬಿಜೋಯ್, ಪ್ರಮುಖರಾದ ಅಬ್ದುಲ್ ಸುಕೂರ್, ಪಳನಿ, ಚಿನ್ನಮ್ಮ, ಸತೀಶ್, ಆಪ್ರು ರವೀಂದ್ರ, ಚೆಕು, ಅನಿಲ್, ವೆಂಕಟೇಶ್, ಕುಂಡಚ್ಚಿರ ಮಂಜು ದೇವಯ್ಯ, ಬಶೀರ್, ನೌಶಾದ್, ಜಾಫರ್, ರವಿ, ಆಟೋ ಚಾಲಕರ ಸಂಘದ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.