Kodagu

ಗುಡ್ಡೆಹೊಸೂರು ಗ್ರಾಮ ಪಂಚಾಯತಿಯಿಂದ ‘ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮ : ನಿಷ್ಠಾವಂತ ಸ್ವಚ್ಛತಾಗಾರರಿಗೆ ಗೌರವಾರ್ಪಣೆ

admincoorgdaily

ಗುಡ್ಡೆಹೊಸೂರು ಗ್ರಾಮ ಪಂಚಾಯತಿಯಿಂದ ‘ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮ : ನಿಷ್ಠಾವಂತ ಸ್ವಚ್ಛತಾಗಾರರಿಗೆ ಗೌರವಾರ್ಪಣೆ
ಕುಶಾಲನಗರ, ಸೆ.23 : ಮಹಾತ್ಮ ಗಾಂಧಿ ಗ್ರಾಮ ಪಂಚಾಯತಿ ಗುಡ್ಡೆಹೊಸೂರು ವತಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ‘ಸ್ವಚ್ಛತಾ ಹೀ ಸೇವಾ’ ಅಭಿಯಾನದ ವಿಶೇಷ ಕಾರ್ಯಕ್ರಮದಲ್ಲಿ, ಗ್ರಾಮದ ನೈರ್ಮಲ್ಯಕ್ಕಾಗಿ ಶ್ರಮಿಸುತ್ತಿರುವ ಸ್ವಚ್ಛತಾ ಗಾರರಾದ ವಿಜಯ್, ನಂಜುಂಡ ಹಾಗೂ ರಮೇಶ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಕೌಶಿಕ್ ಅವರು ಪ್ರಾರ್ಥನಾ ಗೀತೆಯನ್ನು ಹಾಡುವ ಮೂಲಕ ಚಾಲನೆ ನೀಡಿದರು. ನಂತರ ಪಂಚಾಯತಿಯ ಡಿ.ಇ.ಒ ಸುಮಾ ಅವರು ಆಗಮಿಸಿದ ಎಲ್ಲಾ ಗಣ್ಯರು, ಅತಿಥಿಗಳು ಹಾಗೂ ಸಾರ್ವಜನಿಕರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಸ್ವಚ್ಛತಾ ಕಾರ್ಯಕರ್ತರೇ ಗ್ರಾಮದ ಬೆನ್ನೆಲುಬು - ಮೀನುಗಾರಿಕೆ ಸಹಾಯಕ ನಿರ್ದೇಶಕ ಸಚಿನ್ ಅಭಿಮತ:

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮೀನುಗಾರಿಕಾ ಸಹಾಯಕ ನಿರ್ದೇಶಕರಾದ ಸಚಿನ್, 'ಯಾವುದೇ ಗ್ರಾಮ ಪಂಚಾಯಿತಿಯು ಆರೋಗ್ಯಕರವಾಗಿ ಮತ್ತು ಮಾದರಿಯಾಗಿ ಅಭಿವೃದ್ಧಿ ಹೊಂದಲು ಅಲ್ಲಿನ ಸ್ವಚ್ಛತಾಗಾರರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಮುಂಜಾನೆಯಿಂದಲೇ ಊರನ್ನು ಸ್ವಚ್ಛವಾಗಿರಿಸುವ ಇವರ ಸೇವೆ ಸ್ಮರಣೀಯ' ಎಂದು ಬಣ್ಣಿಸಿದರು. ಮುಂದುವರಿದು ಮಾತನಾಡುತ್ತಾ ಅವರು 'ಮತದಾರರ ತೀವ್ರ ಪಟ್ಟಿ ಪರಿಷ್ಕರಣೆ ನಿಮಿತ್ತ ನಾನು ಈ ಕಚೇರಿಯಲ್ಲಿ ಕಳೆದ 15 ದಿನಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಇಲ್ಲಿನ ಗ್ರಾಮ ಪಂಚಾಯಿತಿಯ ಕಾರ್ಯವೈಖರಿ ಮತ್ತು ಸಿಬ್ಬಂದಿಯ ಜವಾಬ್ದಾರಿಯುತ ಕೆಲಸದ ಬಗ್ಗೆ ನನಗೆ ವಿಶೇಷವಾದ ಅಭಿಮಾನ ಮೂಡಿದೆ' ಎಂದು ಅಭಿಪ್ರಾಯಪಟ್ಟರು.

ಗ್ರಾಮದ ಸ್ವಚ್ಛತೆ ಪ್ರತಿಯೊಬ್ಬರ ಹೊಣೆ - ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವರದರಾಜು ಕಿವಿಮಾತು:

ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ವರದರಾಜು, ಸ್ವಚ್ಛತೆಯು ಕೇವಲ ಸರ್ಕಾರದ ಅಥವಾ ಸ್ವಚ್ಛತಾಗಾರರ ಜವಾಬ್ದಾರಿಯಲ್ಲ, ಬದಲಿಗೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದು ತಿಳಿಸಿದರು. ರೈತರು ಹಾಗೂ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಹಸಿರು ಮತ್ತು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಗ್ರಾಮದ ಆರೋಗ್ಯವನ್ನು ಕಾಪಾಡಲು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಪಂಚಾಯತಿಯಿಂದ ನಿರಂತರ ಜನಪರ ಕಾರ್ಯ - ಪಿಡಿಒ ಎಮ್.ಆರ್. ಸುಮೇಶ್ ವಿವರಣೆ :

ವೇದಿಕೆಯಲ್ಲಿ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂ. ಆರ್. ಸುಮೇಶ್, ಗುಡ್ಡೆಹೊಸೂರು ಗ್ರಾಮ ಪಂಚಾಯತಿಯು ಸರ್ಕಾರದ ಮಹತ್ವಾಕಾಂಕ್ಷೆಯ ‘ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು. ಗ್ರಾಮದಲ್ಲಿ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಿಸಲು ಮತ್ತು ಹಸಿ ಕಸ - ಒಣ ಕಸ ವಿಂಗಡಣೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು.

ಸಮಾರಂಭದಲ್ಲಿ ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗದವರು ಹಾಗೂ ಊರಿನ ಗಣ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಅಂತಿಮವಾಗಿ ಸಮಂತ್ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.