ಕ್ರೀಡಾ ವೇದಿಕೆಯಲ್ಲೂ ದ್ವೇಷದ ಮಾತು:ಮಲಯಾಳಿಗಳು ಸ್ವಾಭಿಮಾನಿಗಳು: ಅವಮಾನ ಸಹಿಸಲ್ಲ - ಲಿಜೇಶ್ ಅಮ್ಮತ್ತಿ ಗುಡುಗು
admincoorgdaily

ಮಡಿಕೇರಿ;ವಿವಿಧ ಭಾಷೆ, ಸಂಸ್ಕೃತಿ ಮತ್ತು ಸಮುದಾಯಗಳ ಜನರು ಪರಸ್ಪರ ಸೌಹಾರ್ದದಿಂದ ಬದುಕುತ್ತಿರುವ ಕೊಡಗಿನಲ್ಲಿ, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಪದೇಪದೇ ನಿಂದನಾತ್ಮಕ ಹೇಳಿಕೆ ನೀಡುತ್ತಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ನಡವಳಿಕೆಗೆ ಲಿಜೇಶ್ ಅಮ್ಮತ್ತಿ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಕೊಡಗಿಗೆ ಬಂದಾಗಲೆಲ್ಲಾ ಮಲಯಾಳಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಪ್ರತಾಪ್ ಸಿಂಹನ ಚಾಳಿಯಾಗಿ ಬಿಟ್ಟಿದೆ. ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಪದೇಪದೇ ನಿಂದಿಸುವುದು, ಅವರ ಬಗ್ಗೆ ದ್ವೇಷಭಾವನೆ ಮೂಡಿಸುವ ರೀತಿಯಲ್ಲಿ ಮಾತನಾಡುವುದು ಈ ವ್ಯಕ್ತಿಯ ಕೊಳಕು ಮನಸ್ಥಿತಿಯನ್ನು ಬಯಲು ಮಾಡುತ್ತಿದೆ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಮೂಲನಿವಾಸಿಗಳಾದ ಕೊಡವರು ಹಾಗೂ ಕನ್ನಡಿಗರು, ತಮಿಳರು, ಮಲಯಾಳಿಗಳು ಸೇರಿದಂತೆ ವಿವಿಧ ಭಾಷೆ, ಸಂಸ್ಕೃತಿ ಮತ್ತು ಸಮುದಾಯಗಳ ಜನರು ಪರಸ್ಪರ ಸೌಹಾರ್ದದಿಂದ ಬದುಕುತ್ತಿರುವ ಪ್ರದೇಶ. ಈ ನೆಲದ ಸಾಮಾಜಿಕ ಸಾಮರಸ್ಯ, ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಪರಂಪರೆಯನ್ನು ಗೌರವಿಸಿ ಜನ ಬದುಕು ಸಾಗಿಸುತ್ತಿದ್ದಾರೆ. ಆದರೆ, ಒಂದು ನಿರ್ದಿಷ್ಟ ಸಮುದಾಯವನ್ನು ಪದೇಪದೇ ಟೀಕಿಸುವ ಹಾಗೂ ಅವಹೇಳನ ಮಾಡುವ ಹೇಳಿಕೆಗಳು ಸಮಾಜದಲ್ಲಿ ಅನಗತ್ಯ ಅಸಮಾಧಾನ, ಅಪನಂಬಿಕೆ ಮತ್ತು ದ್ವೇಷವನ್ನು ಹುಟ್ಟುಹಾಕುವ ಅಪಾಯವಿದೆ ಎಂದು ಲಿಜೇಶ್ ಅಮ್ಮತ್ತಿ ಆತಂಕ ವ್ಯಕ್ತಪಡಿಸಿದ್ದಾರೆ.
ಕೊಡಗಿನ ಮಲಯಾಳಿಗಳಲ್ಲಿ ಹೆಚ್ಚಿನವರು ಇವರಿಗೆ ಮತ ಚಲಾಯಿಸುತ್ತಾರೆ. ಆದರೂ ಆ ಜನಾಂಗದ ಜನರ ಬಗ್ಗೆ ಇಷ್ಟೊಂದು ದ್ವೇಷಭಾವನೆ ವ್ಯಕ್ತಪಡಿಸುವುದರ ಹಿಂದಿನ ಉದ್ದೇಶವೇನು? ಮಲಯಾಳಿಗಳು ಎಂದರೆ ಇವರಿಗೆ ಅಷ್ಟೊಂದು ಅಸಹನೆ ಏಕೆ? ರಾಜಕೀಯವಾಗಿ ಜನರನ್ನು ಒಗ್ಗೂಡಿಸುವ ಬದಲು ಭಾಷೆ ಮತ್ತು ಸಮುದಾಯದ ಹೆಸರಿನಲ್ಲಿ ವಿಭಜಿಸುವ ಪ್ರಯತ್ನಕ್ಕೆ ತಡೆಯಿಡಬೇಕಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಲು, ಆಡಳಿತವನ್ನು ಟೀಕಿಸಲು, ಯಾವುದೇ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಲು ಎಲ್ಲರಿಗೂ ಹಕ್ಕಿದೆ. ಆದರೆ ಕ್ರೀಡಾ ವೇದಿಕೆಯಲ್ಲಿ ಒಂದು ಸಮುದಾಯದ ಬಗ್ಗೆ ಕೀಳಾಗಿ ಮಾತನಾಡಿರುವುದು ಖಂಡನೀಯ.ಮಲಯಾಳಿಗಳು ಸ್ವಾಭಿಮಾನದಿಂದ ಬದುಕುವವರ.ಇಡೀ ಒಂದು ಜನಾಂಗದವರನ್ನೇ ಅವಮಾನಿಸುವುದು, ಅವರ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡುವುದು ಸ್ವೀಕಾರಾರ್ಹವಲ್ಲ.
ಪ್ರತಾಪ್ ಸಿಂಹ ಕೊಡಗಿಗೆ ಬಂದಾಗಲೆಲ್ಲಾ ಮಲಯಾಳಿಗಳ ವಿರುದ್ಧ ಇಂತಹ ಹೇಳಿಕೆಗಳು ನೀಡುತ್ತಿರುವುದು ಕೇವಲ ರಾಜಕೀಯ ಭಾಷಣದ ವಿಚಾರವಾಗಿ ನೋಡಲಾಗದು. ಇದು ಕೊಡಗಿನ ಬಹುಸಾಂಸ್ಕೃತಿಕ ವಾತಾವರಣ ಮತ್ತು ಜನರ ನಡುವಿನ ಸೌಹಾರ್ದದ ಮೇಲೂ ಪರಿಣಾಮ ಬೀರುವ ವಿಚಾರವಾಗಿದೆ. ಇಂತಹ ಹೇಳಿಕೆಗಳನ್ನು ನೀಡುವವರು ತಮ್ಮ ಮಾತುಗಳಿಂದ ಸಮಾಜದಲ್ಲಿ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬುದನ್ನು ಗಂಭೀರವಾಗಿ ಆಲೋಚಿಸಬೇಕಾಗದಿದೆ. ಯಾವ ಮುಖವಿಟ್ಟು ಮಲಯಾಳಿಗಳ ಮತ ಕೇಳುತ್ತಾರೆ ಎಂದು ಲಿಜೇಶ್ ಅಮ್ಮತ್ತಿ ಪ್ರಶ್ನಿಸಿದ್ದಾರೆ.
ಕೊಡಗು ದ್ವೇಷದ ರಾಜಕಾರಣಕ್ಕೆ ವೇದಿಕೆಯಾಗಬಾರದು. ಮಲಯಾಳಿಗಳನ್ನು ಅವಮಾನಿಸುವುದರಿಂದ ರಾಜಕೀಯ ಲಾಭ ಸಿಗಬಹುದು ಎಂಬ ಭ್ರಮೆ ಯಾರಿಗೂ ಇರಬಾರದು. ಈ ನೆಲದಲ್ಲಿ ಪ್ರತಿಯೊಂದು ಸಮುದಾಯಕ್ಕೂ ಗೌರವದಿಂದ ಬದುಕುವ ಹಕ್ಕಿದೆ. ಭಾಷೆ, ಧರ್ಮ, ಜಾತಿ ಅಥವಾ ಪ್ರಾದೇಶಿಕ ಗುರುತಿನ ಆಧಾರದಲ್ಲಿ ಜನರನ್ನು ನಿಂದಿಸುವ ರಾಜಕಾರಣಕ್ಕೆ ಸಮಾಜ ಮೌನವಾಗಿ ಬೆಂಬಲ ನೀಡಬಾರದು ಎಂದು ಅವರು ಹೇಳಿದ್ದಾರೆ.
ಮಲಯಾಳಿ ಸಮಾಜದ ಸಂಘಟನೆಗಳು ಪ್ರತಿಕ್ರಿಯೆ ನೀಡಲಿ;
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮಲಯಾಳಿ ಜನಾಂಗದ ಬಗ್ಗೆ ತುಚ್ಛವಾಗಿ ಮಾತನಾಡಿದ ಬಗ್ಗೆ ಕೊಡಗು ಜಿಲ್ಲೆಯ ಎಲ್ಲಾ ಮಲಯಾಳಿ ಸಮಾಜದ ಸಂಘಟನೆಗಳು ಧ್ವನಿ ಎತ್ತಬೇಕು,ಹೊರತು ಮಾನಕ್ಕೆ ಜಾರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಲಿಜೇಶ್ ಅಮ್ಮತ್ತಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.