ಶನಿವಾರ ನಿಮ್ಮ ಮನೆಗೆ ಬರುತ್ತೇನೆ ಎಂದಿದ್ದರು; ಮಾತು ಕೊಟ್ಟಂತೆ ಮನೆಗೇ ಬಂದರು
admincoorgdaily

ಮಡಿಕೇರಿ:ಕಳೆದ ಬುಧವಾರ ಶಾಸಕರ ಕಚೇರಿಗೆ ತಮ್ಮ ಅಹವಾಲು ಸಲ್ಲಿಸಲು ಬಂದಿದ್ದ ಮುಕ್ಕೋಡ್ಲು ಗ್ರಾಮದ ಹಿರಿಯರಾದ, ಅನಾರೋಗ್ಯದಿಂದ ಬಳಲುತ್ತಿರುವ ಪೊನ್ನಚೆಟ್ಟೀರ ಮಣಿ ಅವರನ್ನು ಕಂಡ ಶಾಸಕ ಡಾ. ಮಂತರ್ ಗೌಡ ಅವರು, ಹಿರಿಯರು ಕುಳಿತಿದ್ದ ವಾಹನದ ಬಳಿಗೆ ಖುದ್ದಾಗಿ ತೆರಳಿ ಆತ್ಮೀಯವಾಗಿ ಮಾತನಾಡಿ, ಅವರ ಆರೋಗ್ಯ ಹಾಗೂ ಸಮಸ್ಯೆಯನ್ನು ವಿಚಾರಿಸಿದ್ದರು.
ಆ ಸಂದರ್ಭದಲ್ಲಿ ಹಿರಿಯರ ನೋವನ್ನು ಆಲಿಸಿದ ಶಾಸಕರು, “ಶನಿವಾರ ನಿಮ್ಮ ಮನೆಗೆ ಬರುತ್ತೇನೆ” ಎಂದು ಮಾತು ನೀಡಿದ್ದರು.
ಸಾಮಾನ್ಯವಾಗಿ ಮಾತು ಕೊಡುವುದು ಸುಲಭ…
ಆದರೆ ಕೊಟ್ಟ ಮಾತನ್ನು ನೆನಪಿಟ್ಟುಕೊಂಡು, ಅದನ್ನು ಉಳಿಸಿಕೊಳ್ಳುವುದು ದೊಡ್ಡ ಗುಣ.
ಶನಿವಾರ ಪ್ರಜಾಸೇವಾ ಆಂದೋಲನ ಸೇರಿದಂತೆ ಹಲವು ಕಾರ್ಯಕ್ರಮಗಳು, ಜನರ ಭೇಟಿಗಳು ಹಾಗೂ ಒತ್ತಡದ ಕಾರ್ಯಗಳಿದ್ದರೂ, ತಮ್ಮ ಮಾತನ್ನು ಮರೆಯದೆ ಶನಿವಾರ ರಾತ್ರಿ ಮುಕ್ಕೋಡ್ಲು ಗ್ರಾಮದ ಪೊನ್ನಚೆಟ್ಟೀರ ಮಣಿ ಅವರ ಮನೆಗೆ ಖುದ್ದಾಗಿ ಭೇಟಿ ನೀಡಿದರು.
ಮನೆಗೆ ಬಂದ ಶಾಸಕರನ್ನು ಕಂಡ ಹಿರಿಯರ ಮುಖದಲ್ಲಿ ಮೂಡಿದ ಸಂತೋಷವೇ ಆ ಭೇಟಿಯ ಆತ್ಮೀಯತೆಗೆ ಸಾಕ್ಷಿಯಾಯಿತು.
ಹಿರಿಯರ ಆರೋಗ್ಯ ವಿಚಾರಿಸಿ, ಅವರ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದ ಶಾಸಕರು, ಚಿಕಿತ್ಸೆಗೆ ಅಗತ್ಯವಿರುವ ನೆರವು ಒದಗಿಸಲು ಮುಂದಾಗುವುದಾಗಿ ಹಾಗೂ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.