Kodagu

ಬೇಟೋಳಿ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ

admincoorgdaily

ಬೇಟೋಳಿ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ
ವಿರಾಜಪೇಟೆ:
ಆರೋಗ್ಯವು ಪ್ರತಿಯೊಬ್ಬರಿಗೂ ಪ್ರಮುಖವಾದ ಅಂಶವಾಗಿದ್ದು , ಪ್ರತಿಯೊಬ್ಬರು ತಮ್ಮ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕೊಡವ ಕೆಂಬಟ್ಟಿ ಬಾಳೋ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬಿದ್ದಣಕುಟ್ಟಡ ರೋಹಿಣಿ ಪುಷ್ಪ ಅವರು ಅಭಿಪ್ರಾಯಪಟ್ಟರು.

 ಅವರು ಕೊಡವ ಕೆಂಬಟ್ಟಿ ಬಾಳೋ ಪೊಮ್ಮಕ್ಕಡ ಕೂಟದ ವತಿಯಿಂದ  ವಿರಾಜಪೇಟೆಯ ಹಿಲ್ ಬ್ಲೂಮ್ಸ್ ಆಸ್ಪತ್ರೆಯ ಸಹಯೋಗದಲ್ಲಿ ಸಮೀಪದ ಬೇಟೋಳಿ ಗ್ರಾಮದ ಶ್ರೀ ಪನ್ನಂಗಾಲ ತಮ್ಮೆ  ಕಾಕೋಟಚ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆಯನ್ನು ನೀಡಿ ಅವರು ಮಾತನಾಡುತ್ತಿದ್ದರು. ಮನುಷ್ಯರು ಸಾಮಾನ್ಯವಾಗಿ ಆರೋಗ್ಯ ಸಮಸ್ಯೆ ಉಂಟಾದಾಗ ಆಸ್ಪತ್ರೆಗೆ ಹೋಗುತ್ತೇವೆ. ಅದರ ಕುರಿತು ಮುಂಚೆಯೇ ಜಾಗೃತಿಯನ್ನು ಹೊಂದಿ ಆರೋಗ್ಯ ತಪಾಸಣೆಯನ್ನು ಮಾಡುತ್ತಿರಬೇಕು. ಅವಾಗ ಸಮಸ್ಯೆ ಗಂಭೀರವಾಗಿ ಉಲ್ಬಣವಾಗುವುದನ್ನು ತಡೆಗಟ್ಟಲು ಸಾಧ್ಯ ಎಂದರು.

 ಆರೋಗ್ಯದ ರಕ್ಷಣೆಗೆ ಪ್ರತಿಯೊಬ್ಬರು ಪ್ರಥಮ ಆದ್ಯತೆಯನ್ನು ನೀಡಬೇಕು ಎಂದರು. ಹಿಲ್ ಬ್ಲೂಮ್ಸ್ ಆಸ್ಪತ್ರೆಯ ವೈದ್ಯರಾದ ಡಾ. ವಿನಯ್ ಮಾತನಾಡಿ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಆರೋಗ್ಯ ಜಾಗೃತಿ ವಹಿಸುವುದು ಅತ್ಯಗತ್ಯವಾಗಿದ್ದು ಸದಾ ಚಟುವಟಿಕೆಗಳಿಂದ ಇದ್ದು ಆರೋಗ್ಯದ ರಕ್ಷಣೆಗೆ ಪಣತೊಡಿ ಎಂದರು. ಆಹಾರ ,ವ್ಯಾಯಾಮ, ಯೋಗ,  ಮುಂತಾದವುಗಳ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದರು. ಪೊಮ್ಮಕ್ಕಡ ಕೂಟದ ಪ್ರಧಾನ ಕಾರ್ಯದರ್ಶಿ ಉಮ್ಮಣ ಕುಟ್ಟಡ ಇಂದಿರ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಗ್ರಾಮದ ಹಿರಿಯರಾದ  ಕೂವಳೆ ಕುಟ್ಟಡ ಗಿರೀಶ್, ಕೂವಳೆ ಕುಟ್ಟಡ ವಾಸು ಉಪಸ್ಥಿತರಿದ್ದರು. ಚಟ್ಟ ಕುಟ್ಟಡ ಶಶಿ ಅಚ್ಚಪ್ಪ ನಿರೂಪಿಸಿದರು. 

ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಯಶಸ್ವಿಯಾಗಿ ಜರುಗಿತು. ಹಿಲ್ ಬ್ಲೂಮ್ಸ್ ಆಸ್ಪತ್ರೆಯ ವೈದ್ಯರು ಸಾರ್ವಜನಿಕರ ಆರೋಗ್ಯ ತಪಾಸಣೆಯನ್ನು ನಡೆಸಿದರು. 

ಬಿ ಪಿ ಪರೀಕ್ಷೆ, ಶುಗರ್ ಪರೀಕ್ಷೆ, ಇಸಿಜಿ ಪರೀಕ್ಷೆ, ಸಾಮಾನ್ಯ ಆರೋಗ್ಯ ತಪಾಸಣೆಯು ಜರುಗಿತು. ವೈದ್ಯರು ಸಾರ್ವಜನಿಕರಿಗೆ ಸಲಹೆ ಸೂಚನೆಗಳನ್ನು ನೀಡಿ ಅಗತ್ಯ ಬಿದ್ದವರಿಗೆ ಔಷಧಿಗಳನ್ನು ಸಹ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು, ಹಿಲ್ ಬ್ಲೂಮ್ಸ್ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.