ಕುಶಾಲನಗರದಲ್ಲಿ ಭಾರೀ ಮಳೆ: 3 ಮನೆಗಳಿಗೆ ಹಾನಿ
admincoorgdaily


ಕುಶಾಲನಗರ; ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮೂರು ಕಡೆ ಮನೆ, ಕೊಟ್ಟಿಗೆ ಹಾನಿಯಾಗಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆ.
ತಾಲೂಕಿನ ಚಿಕ್ಕಅಳುವಾರ ಗ್ರಾಮದ ವಿಜಯಕುಮಾರ್ ಟಿ.ವೈ. ಅವರ ವಾಸದ ಮನೆಯ ಗೋಡೆಯ ಒಂದು ಭಾಗ ಅ.22ರಂದು ಸುರಿದ ಮಳೆಗೆ ಕುಸಿದು ಬಿದ್ದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇನ್ನೊಂದೆಡೆ ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಕೂಡುಮಂಗಳೂರು ಗ್ರಾಮದ ಜಯಲಕ್ಷ್ಮಿ ಕೋಂ ಈರಯ್ಯ ಅವರ ಮನೆಯ ಮೇಲ್ಛಾವಣಿ ಮಳೆಯ ಆರ್ಭಟಕ್ಕೆ ಹಾನಿಗೀಡಾಗಿದೆ.
ಅದೇ ರೀತಿ ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ರಂಗಸಮುದ್ರ ಗ್ರಾಮದ ನವೀನ್ ಅವರಿಗೆ ಸೇರಿದ ಜಾನುವಾರು ಕೊಟ್ಟಿಗೆ ಮಳೆ ನೀರು ನುಗ್ಗಿ ಕುಸಿದಿದೆ.
ಗ್ರಾಮ ಲೆಕ್ಕಿಗರು ಮೂರೂ ಸ್ಥಳಗಳಿಗೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದು, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ತಹಶೀಲ್ದಾರ್ ಗೆ ವರದಿ ಸಲ್ಲಿಸಿದ್ದಾರೆ.