ವೀರರಾಣಿ ಒನಕೆ ಓಬವ್ವ ಜಯಂತಿ
admincoorgdaily

ಮಡಿಕೇರಿ:-ಕನ್ನಡ ನಾಡಿನ ವೀರರಮಣಿಯ, ಗಂಡು ಭೂಮಿಯ ವೀರ ನಾರಿಯ, ಚರಿತೆಯ ನಾನು ಹಾಡುವೆ...
ಚಿ.ಉದಯ ಶಂಕರ್ ಅವರು ಬರೆದಿರುವ ವಿಜಯ ಭಾಸ್ಕರ್ ಅವರು ಸಂಗೀತ ಸಂಯೋಜಿಸಿರುವ, ಸಾಹಸ ಸಿಂಹ ವಿಷ್ಣುವರ್ದನ್ ಮತ್ತು ಜಯಂತಿ ಅವರು ನಟಿಸಿರುವ ಮತ್ತು ಪುಟ್ಟಣ ಕಣಗಲ್ ಅವರು ನಿರ್ದೇಶಿಸಿರುವ ನಾಗರಹಾವು ಚಲನಚಿತ್ರದ ಈ ಹಾಡುಗಳ ಸಾಲು ಯಾರಿಗೆ ತಾನೇ ನೆನಪಿಲ್ಲ ಹೇಳಿ..
ನಗರದ ಗಾಂಧಿ ಭವನದಲ್ಲಿ ಬುಧವಾರ ನಡೆದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು ಈ ಹಾಡಿಗೆ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.
ಒನಕೆ ಓಬವ್ವ ಅವರು 18ನೇ ಶತಮಾನದಲ್ಲಿ ರಾಜ್ಯದ ಇತಿಹಾಸದಲ್ಲಿ ಅಸಾಧಾರಣ ಶೌರ್ಯ ಮೆರೆದ ವೀರವನಿತೆ ಎಂದು ನಿವೃತ್ತ ಹಿರಿಯ ಉಪನ್ಯಾಸಕರಾದ ಬಿ.ಬಿ.ಸವಿತ ಅವರು ಹೇಳಿದರು.
ಈಗಿನ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆಯಲ್ಲಿ ಹುಟ್ಟಿದ ಒನಕೆ ಓಬವ್ವ ಅವರು ಚಿತ್ರದುರ್ಗದ ಏಳುಸುತ್ತಿನ ಕೋಟೆಯ ಕಾವಲುಗಾರರಾಗಿದ್ದ ಮುದ್ದ ಹನುಮ ಅವರ ಪತ್ನಿಯಾಗಿದ್ದರು. ಒನಕೆಯನ್ನು ಆಯುಧವನ್ನಾಗಿ ಬಳಸಿಕೊಂಡು ಕೋಟೆ ಅತಿಕ್ರಮಣಕಾರರನ್ನು ಸದೆ ಬಡಿದರು ಎಂದು ವಿವರಿಸಿದರು.
ನೀರು ತರಲು ಹೋಗಿದ್ದ ಒಬವ್ವ ಅವರಿಗೆ ಕೋಟೆಯ ಕಿಂಡಿಯ ಮೂಲಕ ಶತ್ರುಗಳು ನುಗ್ಗುತ್ತಿರುವುದು ತಿಳಿದು ಸಮಯ ಪ್ರಜ್ಞೆಯಿಂದ ಒನಕೆ ಹಿಡಿದುಕೊಂಡು ಒಬ್ಬೊಬ್ಬರಾಗಿ ಬರುತ್ತಿದ್ದ ಶತ್ರುಗಳನ್ನು ಹಿಮ್ಮೆಟ್ಟಿಸಿದರು ಎಂದು ಅವರು ಹೇಳಿದರು.
ಒನಕೆ ಓಬವ್ವ ಅವರ ಸಾಹಸವನ್ನು ಸ್ಮರಿಸಲು ಚಿತ್ರದುರ್ಗದಲ್ಲಿ ಮತ್ತು ರಾಜ್ಯದ ವಿವಿಧೆಡೆ ಪ್ರತಿಮೆಗಳನ್ನು ಸ್ಥಾಪಿಸಿ, ಸ್ಮರಿಸಲಾಗುತ್ತಿದೆ ಎಂದರು.
ಸಾಮಾನ್ಯ ಮಹಿಳೆಯಾಗಿ ಬದುಕುತ್ತಿದ್ದ ಒನಕೆ ಓಬವ್ವ ಶತ್ರುಗಳ ವಿರುದ್ಧ ಹೋರಾಡಿ ಜಯಗಳಿಸುತ್ತಾರೆ. ರಕ್ಷಣೆಗಾಗಿ ಒನಕೆ ಬಳಸುವ ಮೂಲಕ ಜಯ ಪಡೆಯುತ್ತಾರೆ ಎಂದು ಸವಿತಾ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ಲಾಸಂ ಶಾಲೆಯ ಪ್ರಾಂಶುಪಾಲರಾದ ಅನಸೂಯ ಅವರು ಮಾತನಾಡಿ ಕಿತ್ತೂರು ರಾಣಿ ಚೆನ್ನಮ್ಮ, ಅಬ್ಬಕ್ಕ ರಾಣಿ ಮತ್ತು ಕೆಳದಿ ಚೆನ್ನಮ್ಮ ಅವರಂತೆ ಒನಕೆ ಓಬವ್ವ ಅವರು ಶತ್ರುಗಳ ವಿರುದ್ಧ ವೀರವನಿತೆಯಾಗಿ ಹೋರಾಡಿದ್ದಾರೆ ಎಂದು ಸ್ಮರಿಸಿದರು.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಚಿತ್ರದುರ್ಗದ ಕೋಟೆಯ ರಕ್ಷಣೆಗೆ ಹೋರಾಡಿದ ವೀರರಾಣಿ ಒನಕೆ ಓಬವ್ವ ಅವರ ಹೋರಾಟದ ಜೀವನವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದರು.
ಬ್ಲಾಸಂ ಶಾಲೆಯ ವಿದ್ಯಾರ್ಥಿನಿಯರು ವಂದೇ ಮಾತರಂ ಗೀತೆ ಮತ್ತು ನಾಡಗೀತೆ ಹಾಡಿದರು. ಆರೋಗ್ಯ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಅಜೀಜ್, ಶಿಕ್ಷಕರಾದ ಸೆಲ್ವಿ, ಪ್ರಿಯಾಂಕ, ವನಿತ ಇತರರು ಇದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.