Kodagu

ಕೊಡ್ಲಿಪೇಟೆಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ; ಸೋಮವಾರಪೇಟೆ, ಕುಶಾಲನಗರ ಬರಪೀಡಿತ ಘೋಷಣೆಗೆ ಪ್ರಸ್ತಾವನೆ: ಶಾಸಕ ಮಂತರ್ ಗೌಡ ಭರವಸೆ

admincoorgdaily

ಕೊಡ್ಲಿಪೇಟೆಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ; ಸೋಮವಾರಪೇಟೆ, ಕುಶಾಲನಗರ ಬರಪೀಡಿತ ಘೋಷಣೆಗೆ ಪ್ರಸ್ತಾವನೆ: ಶಾಸಕ ಮಂತರ್ ಗೌಡ ಭರವಸೆ
ಶನಿವಾರಸಂತೆ, ಸೆ.12: ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಆಶ್ವಾಸನೆ ನೀಡಿದರು.

ಅವರು ಕೊಡ್ಲಿಪೇಟೆಯ ಕಿರಿಕೊಡ್ಲಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೊಡ್ಲಿಪೇಟೆ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲೇ ಪರಿಹರಿಸುವ ಉದ್ದೇಶದಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಆಯೋಜಿಸುತ್ತಿದೆ. ಆದರೆ ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳು ಜನರ ಕಷ್ಟಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅರ್ಜಿದಾರರನ್ನು ಇಂದು ಬಾ ನಾಳೆ ಬಾ ಎಂದು ಸತಾಯಿಸುತ್ತಿದ್ದಾರೆ. ಕೆಲಸ ಆಗುವುದಾದರೆ ಆಗುತ್ತೆ, ಇಲ್ಲದಿದ್ದರೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಬೇಕು, ಜನರನ್ನು ಸತಾಯಿಸುವುದು ಬೇಡ ಎಂದು ಬೇಸರ ವ್ಯಕ್ತಪಡಿಸಿದರು.

ಕೊಡ್ಲಿಪೇಟೆ ಹೋಬಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಅದಕ್ಕೆ ಆದ್ಯತೆ ನೀಡಲಾಗುತ್ತಿದೆ. ಕೊಡ್ಲಿಪೇಟೆ-ಮಲ್ಲಿಪಟ್ಟಣ 1 ಕಿ.ಮೀ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ ಚಿಂತನೆ ಇದೆ. ಸದ್ಯ ಕಾನೂನು ತಿದ್ದುಪಡಿ ಹಿನ್ನೆಲೆಯಲ್ಲಿ ಅಕ್ರಮ-ಸಕ್ರಮ ರದ್ದುಗೊಂಡಿದೆ ಎಂದು ತಿಳಿಸಿದರು.

ಈ ಆಂದೋಲನದಲ್ಲಿ 153ಕ್ಕೂ ಹೆಚ್ಚು ಅಹವಾಲುಗಳನ್ನು ಸ್ವೀಕರಿಸಲಾಯಿತು. ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ಕಸೂರು, ಹಂಪಾಪುರ, ಶಾಂತಪುರ ಗ್ರಾಮಸ್ಥರು ಹಕ್ಕುಪತ್ರಕ್ಕೆ ಬೇಡಿಕೆ ಸಲ್ಲಿಸಿದರು. ದೊಡ್ಡಕೊಡ್ಲಿ ಗ್ರಾಮದ ಹಕ್ಕುಪತ್ರ, ನೀರಿನ ಸಮಸ್ಯೆ ಕುರಿತು ದಲಿತ ಸಮಿತಿ ಮುಖಂಡರು, ನಿಲುವಾಗಿಲು, ಬೆಸೂರು ಗ್ರಾಮಗಳ ಸಮಸ್ಯೆ ಕುರಿತು ರಾಮು, ಬೆಂಬಳೂರು ಗ್ರಾಮದ ಸಮಸ್ಯೆ ಕುರಿತು ವೆಂಕಟೇಶ್ ಮತ್ತು ಪ್ರಕಾಶ್, ಬ್ಯಾಡಗೊಟ್ಟದ ರಸ್ತೆ, ಪಡಿತರ ವಿತರಣೆ, ವಿದ್ಯುತ್ ಅಭಾವ ಕುರಿತು ಹನೀಫ್, ವೇದಕುಮಾರ್, ತೇಜಕುಮಾರ್, ಕರವೇ ವತಿಯಿಂದ ಆಸ್ಪತ್ರೆ ವೈದ್ಯರ ಸಮಸ್ಯೆ ಕುರಿತು ಮನವಿ ಸಲ್ಲಿಸಲಾಯಿತು.

ಹಕ್ಕುಪತ್ರ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಅಧಿಕಾರಿಗಳ ಸಭೆ ನಡೆಸುವಂತೆ ಕೆಡಿಪಿ ಸದಸ್ಯ ಔರಂಗಜೇಬ್ ಒತ್ತಾಯಿಸಿದರು. ಬಸ್ ನಿಲ್ದಾಣ, ಸಾರಿಗೆ ವ್ಯವಸ್ಥೆ, ರಸ್ತೆ ಸೇರಿದಂತೆ ಪ್ರಮುಖ ಸಮಸ್ಯೆಗಳ ಕುರಿತು ನಾಗರಿಕ ಸಮಿತಿ ಅಹವಾಲು ಸಲ್ಲಿಸಿತು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ನಿತಿನ್ ಚೆಕ್ಕಿ, ತಹಶೀಲ್ದಾರ್ ಕೃಷ್ಣಮೂರ್ತಿ, ತಾ.ಪಂ. ಇಒ ಪರಮೇಶ್ವರ ಕುಮಾರ್, ಡಿವೈಎಸ್ಪಿ ಚಂದ್ರಶೇಖರ್, ಸಿಪಿಐ ಕೃಷ್ಣರಾಜ್, ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಜಿ.ಎಂ.ಕಾಂತರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆದಂ, ಕೆಡಿಪಿ ಹಾಗೂ ಬಗರ್ ಹುಕುಂ ಸಮಿತಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಶಾಸಕರು ತೆರಳಿದ ನಂತರವೂ ಅರ್ಜಿ ಸಲ್ಲಿಕೆ ಕೌಂಟರ್ ಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡುಬಂತು. ಉಳಿಕೆ ಅರ್ಜಿಗಳನ್ನು ಲಾಗಿನ್ ನಲ್ಲಿ ನಮೂದು ಮಾಡಿ ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು. ಕೊಡ್ಲಿಪೇಟೆ ಗ್ರಾಮ ಒನ್ ಮತ್ತು ಕಂದಾಯ ಇಲಾಖೆಯ ಎರಡು ಕೌಂಟರ್ ಗಳು ಕಾರ್ಯನಿರ್ವಹಿಸಿದವು. ಮುಂದಿನ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಅರ್ಜಿ ಸ್ವೀಕೃತಿ ಕೇಂದ್ರ ಮಾಡುವಂತೆ ಶಾಸಕರು ಸೂಚಿಸಿದರು. ಅರ್ಜಿ ಸ್ವೀಕೃತಿ ತಡವಾದ್ದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.