Kodagu

ಹಾಕಿ ಅಂಡರ್ 17 ಕರ್ನಾಟಕ ಬಾಲಕಿಯರ ತಂಡ ಚಾಂಪಿಯನ್

admincoorgdaily

ಹಾಕಿ ಅಂಡರ್ 17 ಕರ್ನಾಟಕ ಬಾಲಕಿಯರ ತಂಡ ಚಾಂಪಿಯನ್
ಪೊನ್ನಂಪೇಟೆ, ಸೆ.13: ಜಾರ್ಖಂಡ್‌ನ ರಾಂಚಿಯ ಮೊರಾಬಾದಿಯ ಮರಂಗ್ ಗೊಮ್ಕೆ ಜೈಪಾಲ್ ಸಿಂಗ್ ಆಸ್ಟ್ರೋ ಟರ್ಫ್ ಹಾಕಿ ಕ್ರೀಡಾಂಗಣದಲ್ಲಿ ಸೆ.10ರಿಂದ 12ರವರೆಗೆ ನಡೆದ ಕ್ರೋ ನ್ಯಾಷನಲ್ ಹಾಕಿ ಟೂರ್ನಿ–2026ರ ಅಂಡರ್-17 ಬಾಲಕಿಯರ ವಿಭಾಗದಲ್ಲಿ CISC ಕರ್ನಾಟಕ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಟೂರ್ನಿಯ ಪೂಲ್ ‘ಎ’ನಲ್ಲಿ ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶ ತಂಡಗಳೊಂದಿಗೆ ಸೆಣಸಿದ ಕರ್ನಾಟಕ, ಆರಂಭಿಕ ಪಂದ್ಯದಲ್ಲಿ ಒಡಿಶಾ ವಿರುದ್ಧ 0-1 ಅಂತರದ ಸೋಲು ಕಂಡಿತು. ಬಳಿಕ ಎಚ್ಚೆತ್ತುಕೊಂಡ ತಂಡ ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶ ತಂಡಗಳನ್ನು ತಲಾ 11-0 ಅಂತರದಲ್ಲಿ ಭರ್ಜರಿಯಾಗಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿತು.
ಸೆಮಿಫೈನಲ್‌ನಲ್ಲಿ ನಾರ್ತ್ ಈಸ್ಟ್ ತಂಡದ ವಿರುದ್ಧ 1-0 ಅಂತರದ ಗೆಲುವು ದಾಖಲಿಸಿದ ಕರ್ನಾಟಕ ಫೈನಲ್‌ಗೆ ಲಗ್ಗೆ ಇಟ್ಟಿತು. ನಿರ್ಣಾಯಕ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ತೀವ್ರ ಪೈಪೋಟಿ ನೀಡಿದ ಕರ್ನಾಟಕ ತಂಡ, ಒಂದು ಗೋಲು ದಾಖಲಿಸಿ 1-0 ಅಂತರದ ರೋಚಕ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು.

ಕೊಡಗಿನ 9 ಆಟಗಾರ್ತಿಯರ ಗಮನಾರ್ಹ ಕೊಡುಗೆ:

ಕರ್ನಾಟಕದ ಈ ಚಾಂಪಿಯನ್ ಸಾಧನೆಯಲ್ಲಿ ಕೊಡಗಿನ ಪ್ರತಿಭಾವಂತ ಆಟಗಾರ್ತಿಯರ ಕೊಡುಗೆಯೂ ಗಮನಾರ್ಹವಾಗಿದೆ. ಅಮ್ಮಂಡ ಕಾರ್ಯಪ್ಪ ಅವರ ತರಬೇತಿಯಲ್ಲಿ ಕೊಡಗಿನಿಂದ ಆಯ್ಕೆಯಾಗಿದ್ದ ಅನ್ಶಿ ಪೊನ್ನಮ್ಮ ಬಾಳಿಯಡ, ಲಸೀನಾ ಮಂದಮಾಡ, ದಿಯಾ ಬೋಜಮ್ಮ ತೆಕ್ಕಡ, ಅದಿತಿ ಮುತ್ತಮ್ಮ ಕುಟ್ಟಂಡ, ರಿಯಾ ದೇಚಮ್ಮ ತೀತರಮಾಡ, ಟಿಯಾ ಮರಿಯಾ ಥಾಮಸ್ ಕರಿಪ್ಪರಂಬಿಲ್, ಆಧ್ಯಾ ದೇಚಮ್ಮ ಮುಕ್ಕಾಟಿರ, ಜಾಹ್ನವಿ ಮೇವಡ ಹಾಗೂ ತನಿಷ್ಕಾ ದೇಚಮ್ಮ ಪುಡಿಯೊಕ್ಕಡ ಅವರು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಕೊಡಗಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಈ ಪೈಕಿ ಏಳು ಆಟಗಾರ್ತಿಯರು ಗೋಣಿಕೊಪ್ಪದ KALS ಶಾಲೆ ಹಾಗೂ ಇಬ್ಬರು ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ ಹಾಗೂ ಬೆಂಗಳೂರಿನ ಚಿನ್ಮಯಿ ಶಾಲೆಯ ವಿದ್ಯಾರ್ಥಿನಿಯರಾಗಿದ್ದಾರೆ.
ಆರಂಭಿಕ ಸೋಲಿನ ಬಳಿಕ ಆತ್ಮವಿಶ್ವಾಸ ಕಳೆದುಕೊಳ್ಳದೆ ಸತತ ಗೆಲುವುಗಳ ಮೂಲಕ ಫೈನಲ್ ತಲುಪಿ, ಅಂತಿಮ ಪಂದ್ಯದಲ್ಲೂ ಸಮರ್ಥ ಆಟ ಪ್ರದರ್ಶಿಸಿದ ಕರ್ನಾಟಕದ ಬಾಲಕಿಯರ ಸಂಘಟಿತ ಹೋರಾಟಕ್ಕೆ ಚಾಂಪಿಯನ್ ಪಟ್ಟದ ರೂಪದಲ್ಲಿ ಪ್ರತಿಫಲ ದೊರೆತಿದೆ. ರಾಜ್ಯದ ಹಾಕಿ ವಲಯದಲ್ಲಿ ಈ ಸಾಧನೆ ಸಂತಸ ಮೂಡಿಸಿದ್ದು, ಕೊಡಗಿನ ಆಟಗಾರ್ತಿಯರ ಪ್ರದರ್ಶನವೂ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.