ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ; ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ
admincoorgdaily

ಮಡಿಕೇರಿ:-ತಲಕಾವೇರಿಯಲ್ಲಿ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಿದ್ಧತೆಗಳು ನಡೆದಿದೆ.
ಅಕ್ಟೋಬರ್ 17 ರಂದು ರಾತ್ರಿ 7.50 ಗಂಟೆಗೆ ಸಂಭವಿಸುವ ಪವಿತ್ರ ತೀರ್ಥೋದ್ಭವ ಕಣ್ತುಂಬಿಕೊಳ್ಳಲು ಭಕ್ತರು ಕಾತರರಾಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ಪವಿತ್ರ ತೀರ್ಥ ಪಡೆಯಲು ತಲಕಾವೇರಿಗೆ ಆಗಮಿಸಲಿದ್ದಾರೆ.
ಕೊಡಗು ಜಿಲ್ಲೆ ಸೇರಿದಂತೆ ನಾಡಿನ ಹಾಗೂ ನೆರೆ ಹೊರೆಯ ರಾಜ್ಯದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಲಕಾವೇರಿಗೆ ಆಗಮಿಸಲಿದ್ದಾರೆ. ಭಕ್ತಾಧಿಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಕುಡಿಯುವ ನೀರು, ಭಕ್ತಾಧಿಗಳು ಸಾಲುಗಟ್ಟಿ ಬರಲು ಬ್ಯಾರಿಕೇಡ್ಗಳ ನಿರ್ಮಾಣ, ಗಣ್ಯರು ಹಾಗೂ ಪತ್ರಕರ್ತರಿಗೆ ಪ್ರತ್ಯೇಕ ಬ್ಯಾರಿಕೇಡ್ ಅಳವಡಿಸಲಾಗಿದೆ. ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಹೂವಿನ ಅಲಂಕಾರ ಸೇರಿದಂತೆ ಹಲವು ಸಿದ್ಧತೆಗಳು ನಡೆದಿದೆ.
ಕೊಡಗು ಏಕೀಕರಣ ರಂಗದಿಂದ ಪ್ರಸಾದ ವಿತರಣೆ ನಡೆಯಲಿದೆ.
ಭಾಗಮಂಡಲದಿಂದ-ತಲಕಾವೇರಿ ವರೆಗೆ ಬೆಳಕಿನ ವ್ಯವಸ್ಥೆ, ಕಳೆದ ಬಾರಿಯಂತೆ ಈ ಬಾರಿಯೂ ಕೆಎಸ್ಆರ್ಟಿಸಿ ವತಿಯಿಂದ 25 ಬಸ್ ವ್ಯವಸ್ಥೆ ಮಾಡಲಾಗಿದ್ದು, ಭಕ್ತಾಧಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ.
ತಲಕಾವೇರಿಯಲ್ಲಿ ತಾಯಿ ಕಾವೇರಿಮಾತೆ ಕುರಿತು ಗೀತಾ ಗಾಯನ ಕಾರ್ಯಕ್ರಮಕ್ಕೆ ಪ್ರತ್ಯೇಕ ವೇದಿಕೆ ನಿರ್ಮಿಸಲಾಗಿದ್ದು, ಕನ್ನಡ ಮತ್ತು ಸಂಸ್ಕøತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಗೀತಾ ಗಾಯನ ಕಾರ್ಯಕ್ರಮ ನಡೆಯಲಿದೆ.
ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ಮಾಡಲಾಗಿದ್ದು, ಉಪ ಪೊಲೀಸ್ ವರಿಷ್ಠಾಧಿಕಾರಿಗಳು, ಪಿಎಸ್ಐಗಳು, ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ಗಳು, ಪೊಲೀಸ್ಗಳು, ಹೋಂ ಗಾರ್ಡ್ಗಳು, ಕರ್ತವ್ಯ ನಿರ್ವಹಿಸಲಿದ್ದಾರೆ. ಜೊತೆಗೆ ಅಗತ್ಯ ಇರುವ ಕಡೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.
ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅವರು ಶುಕ್ರವಾರ ತಲಕಾವೇರಿಗೆ ಭೇಟಿ ನೀಡಿ ದೇವಾಲಯದ ಬಳಿ ಭಂಡಾರ ಮನೆ ನೂತನ ಕಟ್ಟಡವನ್ನು ಉದ್ಘಾಟಿಸಿದರು.
ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ವತಿಯಿಂದ ನೀಡಲಾಗುವ ಅನುದಾನದಲ್ಲಿ ಭಂಡಾರ ಮನೆ ಕಟ್ಟಡ ನಿರ್ಮಿಸಲಾಗಿದೆ.
ಬಳಿಕ ತಲಕಾವೇರಿ ಜಾತ್ರಾ ಮಹೋತ್ಸವ ಸಿದ್ಧತೆ ಸಂಬಂಧ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಶಾಸಕರು, ತಾಯಿ ಕಾವೇರಿ ಪವಿತ್ರ ತೀರ್ಥೋದ್ಭವ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾವೇರಿ ಮಾತೆ ತೀರ್ಥರೂಪಿಣಿ ದರ್ಶನ ಪಡೆಯಲು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು, ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನ ಹರಿಸಲಾಗಿದೆ ಎಂದರು.
ಜಿಲ್ಲಾಡಳಿತ, ಪೊಲೀಸ್, ದೇವಾಲಯ ಸಮಿತಿ, ವಿವಿಧ ಇಲಾಖೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ತಯಾರಿ ಮಾಡಿಕೊಂಡಿದ್ದಾರೆಂದು ಮಾಹಿತಿ ನೀಡಿದರು.
ಕೊಡಗು ಏಕೀಕರಣ ರಂಗದಿಂದ ಪ್ರಸಾದ ವ್ಯವಸ್ಥೆ ಇರಲಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಜರಾಯಿ ಇಲಾಖೆಯಿಂದ 75 ಲಕ್ಷ ರೂ. ಬಿಡುಗಡೆಗೆ ಆದೇಶ ಆಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಭಾಗಮಂಡಲದಿಂದ ತಲಕಾವೇರಿಯ ವರೆಗೆ ನಡೆಯಲಿರುವ ಪಾದಯಾತ್ರೆಯಲ್ಲಿ ಸಹ ಪಾಲ್ಗೊಳ್ಳಲಾಗುವುದು ಎಂದು ಶಾಸಕರಾದ ಪೊನ್ನಣ್ಣ ಅವರು ತಿಳಿಸಿದರು.
ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಬಾನಂಡ ಪ್ರಥ್ಯು, ಲಕ್ಷ್ಮಣ ಎಂ.ಸಿ., ಕಾಂಚನ ಕೆ.ಪಿ., ಹರ್ಷ ಡಿ.ಎನ್, ಕೆ.ಎ.ತಿಮ್ಮಯ್ಯ, ಸಿ.ಎ.ಅಯ್ಯಣ್ಣ, ಕೆ.ಜೆ.ರಘುನಾಥ, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾದ ಕುದುಪಜೆ ಪ್ರಕಾಶ್, ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಭಗಂಡೇಶ್ವರ ದೇವಾಲಯ ತಕ್ಕ ಮುಖ್ಯಸ್ಥರಾದ ಬಳ್ಳಡ್ಕ ಅಪ್ಪಾಜಿ, ದೇವಾಲಯದ ಇಒ ಚಂದ್ರಶೇಖರ್, ಲೋಕೋಪಯೋಗಿ ಎಂಜಿನಿಯರ್ ಗಿರೀಶ್, ನಿರ್ಮಿತಿ ಕೇಂದ್ರದ ಎಜಿನಿಯರ್ ಸಚಿನ್ ಇತರರು ಇದ್ದರು.
ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ, ಪರಿಶೀಲನೆ: ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಶುಕ್ರವಾರ ತಲಕಾವೇರಿಗೆ ಭೇಟಿ ನೀಡಿ ಕಾವೇರಿ ಪವಿತ್ರ ತೀರ್ಥೋದ್ಭವ ಜಾತ್ರೆ ಸಿದ್ಧತೆ ಬಗ್ಗೆ ಪರಿಶೀಲಿಸಿದರು.
ತಾಯಿ ಕಾವೇರಿ ಮಾತೆ ಪವಿತ್ರ ತೀಥೋದ್ಭವಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು, ಬ್ಯಾರಿಕೇಡ್ ನಿರ್ಮಾಣ, ಬೆಳಕಿನ ವ್ಯವಸ್ಥೆ, ಹೂವಿನ ಅಲಂಕಾರ, ಮೂಲ ಸೌಲಭ್ಯಗಳು ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ, ಗೀತಾ ಗಾಯನ ಕಾರ್ಯಕ್ರಮಕ್ಕೆ ಪ್ರತ್ಯೇಕ ವೇದಿಕೆ ನಿರ್ಮಾಣ, ಪ್ರಸಾದ ವಿತರಣಾ ಕೊಠಡಿ ಹೀಗೆ ಹಲವು ಸಿದ್ಧತೆ ಪರಿಶೀಲಿಸಿದರು.
ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಅಭಿಷೇಕ್, ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕರಾದ ರಾಮಚಂದ್ರ ದರ್ಶನ, ಡಿವೈಎಸ್ಪಿ ಸೂರಜ್, ಐ.ಪಿ ಮೇದಪ್ಪ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಗಿರೀಶ್, ಪಂಚಾಯತ್ ರಾಜ್ ಎಂಜಿನಿಯರ್ ಜಿ.ಎಚ್.ನಾಯಕ್, ಜಯಣ್ಣ, ತಾ.ಪಂ.ಇಒ ಶೇಖರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಗಣಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಇತರರು ಇದ್ದರು.