Kodagu

ಅರಮೇರಿ ಕಳಂಚೇರಿ ಮಠದಲ್ಲಿ 'ಹೊಂಬೆಳಕು ಕಿರಣ 249' ತತ್ತ್ವ ಚಿಂತನಾಗೋಷ್ಠಿ, ದಾಸ-ವಚನ-ರಸಧಾರೆ

admincoorgdaily

ಅರಮೇರಿ ಕಳಂಚೇರಿ ಮಠದಲ್ಲಿ 'ಹೊಂಬೆಳಕು ಕಿರಣ 249' ತತ್ತ್ವ ಚಿಂತನಾಗೋಷ್ಠಿ, ದಾಸ-ವಚನ-ರಸಧಾರೆ
ವಿರಾಜಪೇಟೆ:ಕಲೆ, ಸಾಹಿತ್ಯ ಮತ್ತು ಸಂಗೀತವು ಮನುಷ್ಯನ ಮನಸ್ಸನ್ನು ಅರಳಿಸುವ ದಿವ್ಯ ಔಷಧಿಯಾಗಿದ್ದು, ಇಂದಿನ ಮಕ್ಕಳು ಕೇವಲ ಪಠ್ಯಪುಸ್ತಕದ ಅಂಕಗಳಿಗೆ ಮಾತ್ರ ಸೀಮಿತವಾಗದೆ ಕ್ರೀಡೆ, ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಎಸ್.ಎಂ.ಎಸ್. ಸಂಸ್ಥೆಯ ಶಿಕ್ಷಕಿ ಎಚ್. ಮೈಥಿಲೀ ರಾವ್ ಅಭಿಪ್ರಾಯಪಟ್ಟರು.  

 ಇಲ್ಲಿನ ಶ್ರೀ ಅರಮೇರಿ ಕಳಂಚೇರಿ ಮಠದ ಶ್ರೀ ಅಂಗರಾಜೇಂದ್ರ ಪ್ರಸಾದ ಭವನದಲ್ಲಿ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ 'ಹೊಂಬೆಳಕು ಕಿರಣ 249' ಮಾಸಿಕ ತತ್ತ÷್ವಚಿಂತನಾಗೋಷ್ಠಿ ಹಾಗೂ ಭಕ್ತಿಸಿಂಚನ 'ದಾಸ-ವಚನ-ರಸಧಾರೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

 ಸಂಗೀತಕ್ಕೆ ಕಲ್ಲನ್ನೂ ಕರಗಿಸುವ ಶಕ್ತಿಯಿದ್ದು, ಅದು ಏಕಾಗ್ರತೆ ಮತ್ತು ಸಂಸ್ಕಾರವನ್ನು ಬೆಳೆಸುತ್ತದೆ ಎಂದ ಅವರು, 'ಕಾವ್ಯ ಕುಂಚ' ಗಾಯನದ ವಿಶಿಷ್ಟ ಪ್ರಯೋಗದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಸಾಹಿತ್ಯವು ಬದುಕಿನ ಕೈಗನ್ನಡಿಯಾಗಿದ್ದು, ಪುಸ್ತಕಗಳನ್ನು ಓದುವ ಹವ್ಯಾಸದಿಂದ ಮಕ್ಕಳಲ್ಲಿ ಆಲೋಚನಾ ಶಕ್ತಿ ಮತ್ತು ಸೃಜನಶೀಲತೆ ಹೆಚ್ಚುತ್ತದೆ. ಕ್ರೀಡೆಯು ದೈಹಿಕ ಸದೃಢತೆ ಹಾಗೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಕಲಿಸಿದರೆ, ಕಲೆ ಮತ್ತು ಸಾಹಿತ್ಯ ಜೀವನಕ್ಕೆ ಪರಿಪೂರ್ಣತೆಯನ್ನು ನೀಡುತ್ತವೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಇದೇ ವೇಳೆ ಅವರು ಸ್ವತಃ ಗವಾಯಿಗಳ ಭಕ್ತಿ ಕೀರ್ತನೆ ಹಾಗೂ ವಚನಗಳನ್ನು ಸುಶ್ರಾವ್ಯವಾಗಿ ಹಾಡಿ ಸಭಿಕರ ಮನಸೂರೆಗೊಂಡರು. 

   ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಆಶೀರ್ವಚನ ನೀಡಿ, ಪ್ರಸ್ತುತ ಸಮಾಜದಲ್ಲಿ ವಿದ್ಯಾರ್ಥಿಗಳ ದಿಕ್ಕು ತಪ್ಪುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. 
ಇಂದಿನ ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲತಾಣಗಳ ಅತಿಯಾದ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಅಮೂಲ್ಯ ಸಮಯ ಹಾಗೂ ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಅಂಕ ಗಳಿಸುವ ಯಂತ್ರಗಳಾಗುವ ಭರದಲ್ಲಿ ಮಾನವೀಯ ಸಂವೇದನೆ, ಸಹನೆ ಮತ್ತು ಹಿರಿಯರ ಮೇಲಿನ ಗೌರವವನ್ನು ಮರೆಯುತ್ತಿದ್ದಾರೆ. ಕೇವಲ ಭೌತಿಕ ಸುಖದ ಹಿಂದೆ ಬೀಳದೆ, ನಮ್ಮ ಪರಂಪರೆ, ಕಲೆ ಮತ್ತು ಸಾಹಿತ್ಯದ ಸಾರವನ್ನು ಸರಿಯಾಗಿ ಅರ್ಥೈಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

  ನೈತಿಕ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದ ಸ್ವಾಮೀಜಿಗಳು, ಕೇವಲ ಉದ್ಯೋಗ ಗಿಟ್ಟಿಸಿಕೊಳ್ಳುವುದು ಶಿಕ್ಷಣವಲ್ಲ, ಯಾವ ಶಿಕ್ಷಣವು ಮನುಷ್ಯನನ್ನು ವಿನಯವಂತನನ್ನಾಗಿ ಮಾಡುತ್ತದೆಯೋ ಗುರು-ಹಿರಿಯರನ್ನು ಗೌರವಿಸುವುದನ್ನು ಕಲಿಸುತ್ತದೆಯೋ ಅದೇ ನಿಜವಾದ ನೈತಿಕ ಶಿಕ್ಷಣ. ಮನೆಯೇ ಮೊದಲ ಪಾಠಶಾಲೆಯಾಗಿದ್ದು, ಪೋಷಕರು ತಮ್ಮ ಮಕ್ಕಳಿಗೆ ಕೇವಲ ಹಣ ಮತ್ತು ಸೌಲಭ್ಯಗಳನ್ನು ನೀಡಿದರೆ ಸಾಲದು; ಪ್ರತಿದಿನ ಮನೆಗಳಲ್ಲಿ ಒಟ್ಟಿಗೆ ಕುಳಿತು ಮಾತನಾಡುವ, ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುವ ಸಂಸ್ಕಾರ ಬೆಳೆಸಬೇಕು. 12ನೇ ಶತಮಾನದ ಬಸವಾದಿ ಶರಣರ ವಚನಗಳು ಹಾಗೂ ಹರಿದಾಸರ ಸಾಹಿತ್ಯಗಳು ಇಡೀ ಮನುಕುಲಕ್ಕೆ ದಾರಿದೀಪವಾಗಬಲ್ಲ ಜೀವನ ಸಂವಿಧಾನಗಳಾಗಿವೆ. ಮನೆಮನೆಗಳಲ್ಲಿ ವಚನ ಮತ್ತು ದಾಸರ ಪದಗಳ ಗಾಯನ ನಿರಂತರವಾಗಿ ನಡೆಯುವುದರಿಂದ ಮಕ್ಕಳಲ್ಲಿ ನೈತಿಕ ಪ್ರಜ್ಞೆ ಜಾಗೃತಗೊಂಡು, ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಪ್ರತಿಪಾದಿಸಿದರು. 

   ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಹೆಸರಾಂತ ಗಾಯಕ ಹೆಡತಲೆ ನಾರಾಯಣ ಅವರು ನಡೆಸಿಕೊಟ್ಟ 'ದಾಸ-ವಚನ-ರಸಧಾರೆ' ನೆರೆದಿದ್ದ ಕಲಾರಸಿಕರನ್ನು ಭಕ್ತಿಪರವಶರನ್ನಾಗಿಸಿತು. ದಾಸ ಸಾಹಿತ್ಯದಲ್ಲಿ ಅಡಗಿರುವ ಜೀವನ ಮೌಲ್ಯಗಳು, ಸಾಮಾಜಿಕ ಕಳಕಳಿ ಮತ್ತು ವಚನ ಸಾಹಿತ್ಯದ ಆಶಯಗಳನ್ನು ತಮ್ಮ ಭಾವಪೂರ್ಣ ಗಾಯನದ ಮೂಲಕ ಕಟ್ಟಿಕೊಟ್ಟು ಸಂಗೀತದ ರಸದೌತಣ ನೀಡಿದರು. 
   ಶ್ರೀಮಠದ ವತಿಯಿಂದ ಉದ್ಘಾಟಕರಾದ ಎಚ್. ಮೈಥಿಲೀ ರಾವ್ ಹಾಗೂ ಗಾಯಕ ಹೆಡತಲೆ ನಾರಾಯಣ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. 
 
  ಸಮಾರಂಭದಲ್ಲಿ ಖ್ಯಾತ ಪಕ್ಷಿ ತಜ್ಞ ಹಾಗೂ ಕಾರ್ಯಕ್ರಮದ ರುವಾರಿಗಳಾದ ಡಾ. ನರಸಿಂಹನ್, ಶಿಕ್ಷಕಿ ಚೈತ್ರಾ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತ್, ಮಠದ ಭಕ್ತರಾದ ಚಂದನ್ ಕಾಮತ್, ಶ್ರೀಕಾಂತ್ ರಾವ್, ಚೆಟ್ಟಳ್ಳಿಯ ಕೃಷಿಕರಾದ ತಿಮ್ಮಪ್ಪಯ್ಯ, ಆಶಾ ತಿಮ್ಮಪ್ಪಯ್ಯ, ಗಾಂಧಿನಗರದ ಸುಧಾಕರ್, ಸೀತಾಲಕ್ಷ್ಮಿ, ಸಾಹಿತಿ ಗಿರೀಶ್ ಕಿಗ್ಗಾಲು, ನಿವೃತ್ತ ಮುಖ್ಯೋಪಾಧ್ಯಾಯರು, ಯೋಗ ಗುರುಗಳಾದ ಪಿ.ಎ. ಲಕ್ಷ್ಮಿನಾರಾಯಣ, ರಜಿತ ಕಾರ್ಯಪ್ಪ, ಡಿ.ಮಂಜುನಾಥ್, ವಿದ್ಯಾರ್ಥಿಗಳಾದ ಕುಮಾರಿ ಸೋನಾ, ಅಭಿನವ್, ಧೀರಜ್ ಸೇರಿದಂತೆ ಶ್ರೀಮಠದ ವಿದ್ಯಾರ್ಥಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.