Kodagu

ಅರಮೇರಿ ಕಳಂಚೇರಿ ಮಠದಲ್ಲಿ ನಡೆದ 'ಹೊಂಬೆಳಕು ಕಿರಣ 248' ಮಾಸಿಕ ತತ್ತ್ವ ಚಿಂತನಾಗೋಷ್ಠಿ ಕಾರ್ಯಕ್ರಮ

admincoorgdaily

ಅರಮೇರಿ ಕಳಂಚೇರಿ ಮಠದಲ್ಲಿ ನಡೆದ 'ಹೊಂಬೆಳಕು ಕಿರಣ 248' ಮಾಸಿಕ ತತ್ತ್ವ ಚಿಂತನಾಗೋಷ್ಠಿ ಕಾರ್ಯಕ್ರಮ
'
ವಿರಾಜಪೇಟೆ: ಇಂದಿನ ಆಧುನಿಕ ಜೀವನ ವ್ಯವಸ್ಥೆಯು ಅತಿ ವೇಗವಾಗಿ ಸಾಗುತ್ತಿದ್ದರೂ, ನಮ್ಮ ನೈತಿಕ ನೆಲೆಗಟ್ಟುಗಳು ಕುಸಿಯುತ್ತಿರುವುದು ಆತಂಕಕಾರಿ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಾಹಿತಿಗಳಾದ ಶ್ರೀಶೈಲ ಬೀಳಗಿ ಅವರು ಅಭಿಪ್ರಾಯಪಟ್ಟರು.
  ಶ್ರೀ ಅರಮೇರಿ ಕಳಂಚೇರಿ ಮಠದಲ್ಲಿ ನಡೆದ 'ಹೊಂಬೆಳಕು ಕಿರಣ 248' ಮಾಸಿಕ ತತ್ತ್ವ ಚಿಂತನಾಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಸುದೀರ್ಘ ವೃತ್ತಿಜೀವನದ ನೆನಪುಗಳನ್ನು ಮೆಲುಕು ಹಾಕುತ್ತಾ, ಇಂದಿನ ಜೀವನ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿ ವೃಂದದ ಕುರಿತು ಅತ್ಯಮೂಲ್ಯ ವಿಚಾರಗಳನ್ನು, ತಮ್ಮ ಶಿಕ್ಷಣ ಇಲಾಖೆಯ ವೃತ್ತಿಜೀವನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಹತ್ತಿರದಿಂದ ಕಂಡ ಅನುಭವವನ್ನು ಹಂಚಿಕೊಂಡ ಅವರು, ಇಂದಿನ ವಿದ್ಯಾರ್ಥಿ ವೃಂದವು ಕೇವಲ ಅಂಕಗಳಿಗೆ ಅಥವಾ ಕಾಗದದ ಪದವಿಗಳಿಗೆ ಮಾತ್ರ ಸೀಮಿತರಾಗಬಾರದು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಅತಿ ವ್ಯಾಮೋಹದಿಂದ ಹೊರಬರಬೇಕು. ಪಕ್ಕದ ಮನೆಯವರೊಂದಿಗೆ ಬೆರೆಯದ ಸಂಕುಚಿತ ಮನೋಭಾವ ಇಂದು ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ವಿಶಾಲ ಹೃದಯವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

  ಮುಖ್ಯ ಅತಿಥಿಗಳಾಗಿದ್ದ ಹುಣಸೂರು ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕಾರ್ಯದರ್ಶಿ ಡಾ. ರೇಣುಕ ಪ್ರಸಾದ್ ಕೆ.ಎಸ್. ವ್ಯಕ್ತಿತ್ವದ ಘನತೆ ಮತ್ತು ಶೈಕ್ಷಣಿಕ ಜವಾಬ್ದಾರಿ ಕುರಿತು ವಿಸ್ತೃತವಾಗಿ ಉಪನ್ಯಾಸ ನೀಡಿ ಕಾಯಕ ಯೋಗಿ ಬಸವಣ್ಣನವರು ಹಾಗೂ ಅಕ್ಕಮಹಾದೇವಿಯವರ ವಚನಗಳನ್ನು ಉಲ್ಲೇಖಿಸಿ ಮನುಷ್ಯ ಹೇಗಿರಬೇಕು ಎಂಬುದರ ಕುರಿತು ಗಹನವಾದ ವಿಚಾರಗಳನ್ನು ಮಂಡಿಸಿದರು.

   ಕಾಯಕ ಯೋಗಿ ಬಸವಣ್ಣನವರ ಕಾಯಕ ಕ್ರಾಂತಿ ಮತ್ತು ಅಕ್ಕಮಹಾದೇವಿಯವರ ವಚನಗಳ ಸಾರವನ್ನು ವಿವರಿಸಿದ ಅವರು, "ಕಾಯಕವೇ ಕೈಲಾಸ" ಎಂಬ ತತ್ತ್ವ ವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅಕ್ಕಮಹಾದೇವಿಯವರು ಭೌತಿಕ ಪ್ರಪಂಚದ ಮೋಹವನ್ನು ತೊರೆದು ಅಂತರಂಗದ ಶುದ್ಧಿಯನ್ನು ಸಾಧಿಸಿದಂತೆ, ಇಂದಿನ ಮನುಷ್ಯನು ಜಾತಿ, ಧರ್ಮ, ಮತಗಳ ಗಡಿಯನ್ನು ಮೀರಿ ಮೊದಲು ಪರಿಶುದ್ಧವಾದ "ಮನುಷ್ಯತ್ವ"ವನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

  ಮನುಷ್ಯ ಹೇಗಿರಬೇಕು, ಮನುಷ್ಯನ ಆಲೋಚನೆಗಳು ಸಂಕುಚಿತವಾಗಿರಬಾರದು. ಹೃದಯವು ಯೋಚಿಸುವುದಿಲ್ಲ, ಬುದ್ಧಿಯೇ ಯೋಚಿಸುತ್ತದೆ; ಹಾಗಾಗಿ ನಮ್ಮ ಬುದ್ಧಿಯನ್ನು ಸನ್ಮಾರ್ಗದಲ್ಲಿ ಇಟ್ಟುಕೊಳ್ಳಬೇಕು. ಪ್ರತಿಯೊಂದನ್ನು ಕೇವಲ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ನೋಡುವ ಪ್ರವೃತ್ತಿ ಬಿಡಬೇಕು ಎಂದರು.

  ಹಿಂದಿನ ಕಾಲದ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ವ್ಯತ್ಯಾಸವಿದ್ದು, ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಕೇವಲ ಪದವಿಗಳಿಸಲು ಆತುರಪಡದೆ ಒಳಗಿನಿಂದ ಗಟ್ಟಿಯಾದ ಶೈಕ್ಷಣಿಕ ಅರ್ಹತೆ ಬೆಳೆಸಿಕೊಳ್ಳಬೇಕು. "ಗುರು ಅಂದರೆ ಸರ್ವೋತ್ತಮ, ಗುರು ಅಂದರೆ ಬ್ರಹ್ಮಾಂಡ." ಶಿಕ್ಷಕ ಉತ್ತಮವಾಗಿಲ್ಲದಿದ್ದರೆ ಆತ ನಿಜವಾದ ಶಿಕ್ಷಕನೇ ಆಗಲಾರ ಎಂದು ಗುರುವಿನ ಮಹತ್ವ ಸಾರಿದರು.

   ಇಂದಿನ ಯುವ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮುಂತಾದವುಗಳ ವ್ಯಾಮೋಹದಿಂದ ತಪ್ಪು ದಾರಿಗೆ ಸರಿಯುತ್ತಿರುವುದು ಖಂಡನೀಯ. ಬಟ್ಟೆಯ ದಾರ ಎಳೆದರೆ ಅದು ಹೇಗೆ ನಿಲ್ಲುವುದಿಲ್ಲವೋ, ಹಾಗೆಯೇ ಮಾನವ ಸಂಬAಧಗಳೂ ಕೂಡ ಎಚ್ಚರ ತಪ್ಪಿದರೆ ಕಳಚಿಹೋಗುತ್ತವೆ. ಒಬ್ಬನೇ ಮಾಡಿದರೆ ಅದು ಕೇವಲ ಊಟ, ಹತ್ತು ಜನ ಸೇರಿ ಮಾಡಿದರೆ ಹಬ್ಬದ ಊಟ ಎಂಬಂತೆ ಒಗ್ಗಟ್ಟು ಮತ್ತು ಸಾಮರಸ್ಯದಿಂದ ಬದುಕಬೇಕು ಎಂದು ನುಡಿದರು.
   ಪ್ರಕೃತಿಯೊಂದಿಗೆ ಒಡನಾಟ ಇಟ್ಟುಕೊಂಡು ಬದುಕನ್ನು ಕಟ್ಟಿಕೊಳ್ಳಬೇಕು. ನಮ್ಮಲ್ಲಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾಮರ್ಥ್ಯದ ಗುಣಗಳು ಸದಾ ಇರಬೇಕು. ಮನುಷ್ಯ ಎಷ್ಟೇ ದೊಡ್ಡ ಹುದ್ದೆಗೆ ಏರಬಹುದು, ಆದರೆ ಸಮಾಜದಲ್ಲಿ ವ್ಯಕ್ತಿತ್ವದ ಘನತೆ ಮತ್ತು ಸಮಾಜಮುಖಿ ಚಿಂತನೆಯೇ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


  ಶ್ರೀ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿಗಳು, ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ ಇಂದಿನ ಸಮಾಜಕ್ಕೆ ಮತ್ತು ವಿದ್ಯಾರ್ಥಿ ವೃಂದಕ್ಕೆ ಅತ್ಯಂತ ಪ್ರಸ್ತುತವಾಗುವ ಮಾರ್ಗದರ್ಶನ ನೀಡಿ, ಆಗಿನ ಕಾಲದಲ್ಲಿದ್ದ ಶಿಕ್ಷಣಕ್ಕೂ ಇಂದಿನ ಶಿಕ್ಷಣ ವ್ಯವಸ್ಥೆಗೂ ಬಹಳ ವ್ಯತ್ಯಾಸವಿದೆ. ಅಂದಿನ ಕಾಲದಲ್ಲಿ ಕೇವಲ ಅಕ್ಷರ ಜ್ಞಾನ ಅಥವಾ ಬೌದ್ಧಿಕ ಶಿಕ್ಷಣಕ್ಕೆ ಮಾತ್ರ ಒತ್ತು ನೀಡುತ್ತಿರಲಿಲ್ಲ; ಅದರೊಂದಿಗೆ ನೈತಿಕ ಶಿಕ್ಷಣ ಹಾಗೂ ಆಧ್ಯಾತ್ಮಿಕ ಶಿಕ್ಷಣಕ್ಕೆ ಅತ್ಯುನ್ನತ ಸ್ಥಾನವಿತ್ತು. ಬದುಕಿನಲ್ಲಿ ಕೇವಲ ಪುಸ್ತಕದ ಶಿಕ್ಷಣವಿದ್ದರೆ ಸಾಲದು. ಬದುಕನ್ನು ಯಾವ ರೀತಿಯಲ್ಲಿ ಅನುಭವಿಸಿಕೊಂಡು ಹೋಗಬೇಕು, ಜೀವನದ ಸವಾಲುಗಳನ್ನು ಎದುರಿಸುವ ಗಟ್ಟಿತನವನ್ನು ಯಾವ ರೀತಿ ರೂಢಿಸಿಕೊಳ್ಳಬೇಕು ಎಂಬ ಅನುಭವದ ಮಾಗುವಿಕೆ ಪ್ರತಿ ವಿದ್ಯಾರ್ಥಿಗೂ ಅತ್ಯಗತ್ಯ. ಇವತ್ತು ಸಮಾಜ ತಾಂತ್ರಿಕತೆ ಮುಂದುವರಿಯುತ್ತಿರುವಂತೆ ಯುವ ಪೀಳಿಗೆಯ  ಆಲೋಚನೆಗಳೂ ಬದಲಾಗುತ್ತಿವೆ. ಆದರೆ ಈ ಬದಲಾವಣೆ ವಿನಾಶದ ಕಡೆಗೆ ಹೋಗದೆ, ಸನ್ಮಾರ್ಗದಲ್ಲಿ ಸಾಗಬೇಕು. ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಮರೆಯದೆ, ಆಧ್ಯಾತ್ಮಿಕ ಚಿಂತನೆ ಮತ್ತು ಅಂತರAಗದ ಶಾಂತಿಯನ್ನು ರೂಢಿಸಿಕೊಳ್ಳುವ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸಬೇಕು ಎಂದು ಸ್ವಾಮೀಜಿಯವರು ಆಶೀರ್ವಚನ ನೀಡಿದರು.

  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅತ್ಯಮೂಲ್ಯ ವಿಚಾರಗಳನ್ನು ಹಂಚಿಕೊಂಡ ಅತಿಥಿಗಳಾದ ಶ್ರೀಶೈಲ ಬೀಳಗಿ ಹಾಗೂ ರೇಣುಕ ಪ್ರಸಾದ್ ಅವರನ್ನು ಶ್ರೀಮಠದ ವತಿಯಿಂದ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

 ಸಮಾರಂಭದಲ್ಲಿ ರೇಣುಕ ಪ್ರಸಾದ್ ಅವರ ಪತ್ನಿ ಸುಜಾತಾ, ವಿರಾಜಪೇಟೆಯ ವೈದ್ಯರು ಹಾಗೂ ಪಕ್ಷಿ ತಜ್ಞರಾದ ಡಾ. ನರಸಿಂಹನ್, ಸಾಹಿತಿಗಳಾದ ಗಿರೀಶ್ ಕಿಗ್ಗಾಲು, ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಯೋಗ ಗುರುಗಳಾದ ಪಿ.ಎ. ಲಕ್ಷ್ಮಿ ನಾರಾಯಣ, ಕೃಷಿಕರಾದ ತಿಮ್ಮಪ್ಪಯ್ಯ ಹಾಗೂ ಆಶಾ ತಿಮ್ಮಪ್ಪಯ್ಯ, ಶಿಕ್ಷಕರಾದ ಮೈಥಿಲಿ ರಾವ್, ಸುಧಾಕರ್, ಸೀತಾಲಕ್ಷ್ಮಿ, ವೈಲೇಶ್, ಡಿ. ಮಂಜುನಾಥ್, ರಜಿತ ಕಾರ್ಯಪ್ಪ ಸೇರಿದಂತೆ ಅನೇಕ ಗಣ್ಯರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿ ಯಶಸ್ ಗೌಡ ಅವರು ಸ್ವಾಗತ ಕೋರಿದರು, ಶಿಕ್ಷಕರಾದ ಚೈತ್ರ ಅವರು ನಿರೂಪಣೆ ಮಾಡಿದರು ಮತ್ತು ವರ್ಷಿಣಿ ಅವರು ವಂದನಾರ್ಪಣೆ ಸಲ್ಲಿಸಿದರು.

  ಉದ್ಘಾಟಕರಾದ ಶ್ರೀಶೈಲ ಬೀಳಗಿ ಅವರ ಪರಿಚಯವನ್ನು ಧೀರಜ್ ಗೌಡ ಹಾಗೂ ಉಪನ್ಯಾಸಕ ರೇಣುಕ ಪ್ರಸಾದ್ ಅವರ ಪರಿಚಯವನ್ನು ವಿದ್ಯಾರ್ಥಿನಿ ಸೋನಾ ಮಾಡಿಕೊಟ್ಟರು.