ಸೆ.19ರಂದು ಚೆಟ್ಟಳ್ಳಿಯಲ್ಲಿ ಮಾನವ ಸರಪಳಿ ಕಾರ್ಯಕ್ರಮ
admincoorgdaily

ಮಡಿಕೇರಿ ಸೆ.15 : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕೊಡವ ಪ್ರದೇಶದಾದ್ಯಂತ ಹಮ್ಮಿಕೊಂಡಿರುವ ಜನಜಾಗೃತಿ ಕಾರ್ಯಕ್ರಮದ ಅಂಗವಾಗಿ ಸೆ.19ರಂದು ಚೆಟ್ಟಳ್ಳಿಯಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ.
ನೂರೊಕ್ಕನಾಡಿನ ಚೆಟ್ಟಳ್ಳಿಯಲ್ಲಿ ಶನಿವಾರ ಬೆಳಿಗ್ಗೆ 10.30 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಕೊಡವ ಜನಾಂಗದ ಅಸ್ತಿತ್ವ, ಗುರುತು, ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆ ಹಾಗೂ ಆರ್ಥಿಕ ಮತ್ತು ರಾಜಕೀಯ ಹಕ್ಕುಗಳ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಡವಲ್ಯಾಂಡ್‌ಗೆ ಸಂವಿಧಾನದ 244, 371ನೇ ವಿಧಿಗಳು ಹಾಗೂ 5 ಮತ್ತು 6ನೇ ಶೆಡ್ಯೂಲ್‌ಗಳ ಅಡಿಯಲ್ಲಿ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಕೊಡವ ಜನಾಂಗಕ್ಕೆ ಮೂಲನಿವಾಸಿ ಸಮುದಾಯವಾಗಿ ವಿಶೇಷ ಸಂವಿಧಾನಬದ್ಧ ಮಾನ್ಯತೆ ನೀಡಬೇಕು.
ಕೊಡವರ ಪವಿತ್ರ ಗನ್-ಠೋಕ್ ಆಚರಣೆಯನ್ನು ಸಂವಿಧಾನದ 25, 26 ಮತ್ತು 28ನೇ ವಿಧಿಗಳ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿ ಮುಂದುವರಿಸಬೇಕು. ಕೊಡವತಕ್ಕ್ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ಗೆ ಸೇರಿಸಬೇಕು. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ ಮಾದರಿಯಲ್ಲಿ ಕೊಡವರಿಗೆ ಪ್ರತ್ಯೇಕ ಅಮೂರ್ತ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರ ಕಲ್ಪಿಸಬೇಕು ಎಂಬ ಬೇಡಿಕೆಗಳ ಕುರಿತು ಕೊಡವ ಜನ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದ್ದಾರೆ.