State News

ಬಿಯರ್ ಬಾಟಲಿಯಿಂದ ಪತ್ನಿಗೆ ಇರಿದು ಕೊಲೆಗೈದು, ಪತಿ ಆತ್ಮಹತ್ಯೆ

admincoorgdaily

ಬಿಯರ್ ಬಾಟಲಿಯಿಂದ ಪತ್ನಿಗೆ ಇರಿದು ಕೊಲೆಗೈದು, ಪತಿ ಆತ್ಮಹತ್ಯೆ
ಬೆಂಗಳೂರು: ಎಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ವಿಭೂತಿಪುರದ ಮನೆಯೊಂದರಲ್ಲಿ ಪತಿ ಪತ್ನಿಗೆ ಬಿಯರ್ ಬಾಟಲಿಯಿಂದ ಇರಿದು ಕೊಲೆ ಮಾಡಿ, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತರನ್ನು ಶ್ರುತಿ (30) ಮತ್ತು ರಾಘವೇಂದ್ರ (36) ಎಂದು ಗುರುತಿಸಲಾಗಿದೆ. ಈ ಸಂಬಂಧ ಎಚ್‌ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರುತಿ ಮತ್ತು ರಾಘವೇಂದ್ರ ಮೂಲತಃ ದಾವಣಗೆರೆಯವರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಮಕ್ಕಳನ್ನು ಶ್ರುತಿಯ ಪೋಷಕರ ಮನೆಯಲ್ಲಿ ಬಿಟ್ಟು ದಂಪತಿ ವಿಭೂತಿಪುರದಲ್ಲಿ ವಾಸವಿದ್ದರು. ಅವರು ವಾಸವಿದ್ದ ಕಟ್ಟಡದ ಮೊದಲ ಮಹಡಿಯಲ್ಲಿ ರಾಘವೇಂದ್ರ ಅವರ ಪೋಷಕರು ವಾಸವಿದ್ದರು. ರಾಘವೇಂದ್ರ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಶ್ರುತಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮನೆಕೆಲಸ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದಂಪತಿ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ‘ಪತ್ನಿ ಅಡುಗೆ ಮಾಡಲ್ಲ, ಅತಿಯಾಗಿ ಮೊಬೈಲ್ ಫೋನ್ ಬಳಸುತ್ತಿರುತ್ತಾಳೆ’ ಎಂದು ರಾಘವೇಂದ್ರ ಗಲಾಟೆ ಮಾಡುತ್ತಿದ್ದರು. ‘ಪತಿ ಮದ್ಯಪಾನ ಮಾಡಿ ಮನೆಗೆ ಬಂದು ಗಲಾಟೆ ಮಾಡುತ್ತಾರೆ’ ಎಂದು ಶ್ರುತಿ ಆರೋಪಿಸಿದ್ದರು.

ದಂಪತಿ ನಡುವಿನ ಗಲಾಟೆಯು ಇತ್ತೀಚೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಇಬ್ಬರಿಗೂ ಪೊಲೀಸರು ಬುದ್ಧಿಮಾತು ಹೇಳಿ ಕಳುಹಿಸಿದ್ದರು.

ಮಂಗಳವಾರ ರಾತ್ರಿ ದಂಪತಿ ನಡುವೆ ಮಾತಿಗೆ ಮಾತು ಬೆಳೆದು, ಜಗಳ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆಗ ಆಕ್ರೋಶಗೊಂಡಿದ್ದ ರಾಘವೇಂದ್ರ, ಖಾಲಿ ಬಿಯರ್ ಬಾಟಲಿಯಿಂದ ಪತ್ನಿಗೆ ಇರಿದು ಕೊಲೆ ಮಾಡಿದ್ದಾರೆ. ಬಳಿಕ ಅವರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ಎಚ್‌ಎಎಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.