Kodagu

ವಿರಾಜಪೇಟೆ ಕ್ಷೇತ್ರದಲ್ಲಿ ಕಾನೂನು ಬಾಹಿರವಾಗಿ ಮತದಾನದ ಹಕ್ಕು ರದ್ದಾಗಿದ್ದರೆ ದಾಖಲೆ ಸಹಿತ ಸಾಬೀತು ಪಡಿಸಿ : ಕಾಂಗ್ರೆಸ್ ಗೆ ಬಿಜೆಪಿ ವಕ್ತಾರ ರಾಕೇಶ್ ದೇವಯ್ಯ ಸವಾಲು

admincoorgdaily

ವಿರಾಜಪೇಟೆ ಕ್ಷೇತ್ರದಲ್ಲಿ ಕಾನೂನು ಬಾಹಿರವಾಗಿ ಮತದಾನದ ಹಕ್ಕು ರದ್ದಾಗಿದ್ದರೆ ದಾಖಲೆ ಸಹಿತ ಸಾಬೀತು ಪಡಿಸಿ : ಕಾಂಗ್ರೆಸ್ ಗೆ ಬಿಜೆಪಿ ವಕ್ತಾರ ರಾಕೇಶ್ ದೇವಯ್ಯ ಸವಾಲು
ಮಡಿಕೇರಿ : ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಸಂದರ್ಭ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಮತದಾರರ ಮತದಾನದ ಹಕ್ಕನ್ನು ಕಾನೂನು ಬಾಹಿರವಾಗಿ ರದ್ದುಪಡಿಸಲಾಗಿದೆ ಮತ್ತು ಯಾರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂಬುವುದನ್ನು ಕಾಂಗ್ರೆಸ್ ಪಕ್ಷ ದಾಖಲೆ ಸಹಿತ ಬಹಿರಂಗಪಡಿಸಲಿ ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಸವಾಲು ಹಾಕಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾಂಗ್ರೆಸ್ ಪಕ್ಷ ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ ಎಸ್‌ಐಆರ್ ಪ್ರಕ್ರಿಯೆ ಕುರಿತು ಗೊಂದಲ  ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ವ್ಯಕ್ತಿಯ ಒಂದು ಕಡೆಗಿನ ನೋಂದಣಿಯನ್ನು ರದ್ದುಪಡಿಸಿದರೆ, ಮೃತಪಟ್ಟವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿದರೆ, ಒಬ್ಬ ವ್ಯಕ್ತಿ ಹಾಗೂ ಅವರ ಕುಟುಂಬದವರು ಆ ಸ್ಥಳದಲ್ಲಿ ವಾಸವಿಲ್ಲದಿದ್ದಾಗ ಅವರ ಹೆಸರುಗಳನ್ನು ಪರಿಶೀಲನೆ ನಡೆಸಿ ಪಟ್ಟಿಯಿಂದ ತೆಗೆದು ಹಾಕಿದರೆ ಅದು ತಪ್ಪೇ ? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯುವ ಏಕೈಕ ಉದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡುತ್ತಾ ಸತ್ಯವನ್ನು ಮರೆಮಾಚಲು ಪ್ರಯತ್ನಿಸಿದಾಗ, ಬಿಜೆಪಿ ವಾಸ್ತವಾಂಶವÀನ್ನು ಜನರ ಮುಂದಿಡುವ ಕೆಲಸ ಮಾಡಿದೆ. ಇದನ್ನು ಸಹಿಸದ ಕಾಂಗ್ರೆಸ್ಸಿಗರು ಬಿಜೆಪಿ ಚುನಾವಣಾ ಆಯೋಗದ ವಕ್ತಾರರಂತೆ ವರ್ತಿಸುತ್ತಿದೆ ಎನ್ನುವ ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ಸುಖಾಸುಮ್ಮನೆ ಫಾರಂ ಸಂಖ್ಯೆ 7 ಅರ್ಜಿಗಳನ್ನು ಭರ್ತಿ ಮಾಡಿ ಮತದಾರರನ್ನು ಪಟ್ಟಿಯಿಂದ ಹೊರಗಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಬಿಜೆಪಿ ವಿರುದ್ಧ ಈ ರೀತಿಯ ಆಧಾರರಹಿತ ಆರೋಪಗಳನ್ನು ಮಾಡುತ್ತಿರುವಾಗ ಬಿಜೆಪಿ ಅದಕ್ಕೆ ಉತ್ತರಿಸಬಾರದೇ? ಕಾಂಗ್ರೆಸ್ ನಾಯಕರೂ ಕೂಡ ಚುನಾವಣಾ ಆಯೋಗದ ವಕ್ತಾರರಂತೆ ಮಾತನಾಡುತ್ತಿದ್ದಾರೆಯೇ ಎಂದು ರಾಕೇಶ್ ದೇವಯ್ಯ ತಿರುಗೇಟು ನೀಡಿದ್ದಾರೆ.

ಚುನಾವಣಾ ಆಯೋಗದ ಪ್ರಕ್ರಿಯೆಯಲ್ಲಿ ಯಾವುದಾದರೂ ತಪ್ಪು ನಡೆದಿದ್ದರೆ ಅಥವಾ ಅನ್ಯಾಯವಾಗಿದ್ದರೆ ಅದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ ನ್ಯಾಯಾಲಯದ ಮೊರೆ ಹೋಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಆದರೆ ಕಾಂಗ್ರೆಸ್ ನಾಯಕರು ಆ ಮಾರ್ಗವನ್ನು ಅನುಸರಿಸದೆ ಆರೋಪಗಳನ್ನು ಮಾಡುವುದೇಕೆ? ಅವರಿಗೆ ನ್ಯಾಯಾಲಯದ ಮೇಲೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆಯಿಂದ ಎಷ್ಟು ಜನರಿಗೆ ಅನ್ಯಾಯವಾಗಿದೆ ಎಂಬುವುದನ್ನು ದಾಖಲೆಗಳ ಸಹಿತ ಜನರ ಮುಂದಿಡಲಿ. 

ರಾಷ್ಟ್ರೀಯ ನಾಯಕರನ್ನು ಮೆಚ್ಚಿಸುವ ಉದ್ದೇಶದಿಂದ ಕಾಂಗ್ರೆಸ್ಸಿಗರು ಕ್ಷೇತ್ರದ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಮಾಡಬಾರದು. ವಿರಾಜಪೇಟೆ ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿದ್ದು, ಪ್ರಜಾಪ್ರಭುತ್ವ, ಸಂವಿಧಾನ, ಮತದಾನ, ಚುನಾವಣಾ ಆಯೋಗ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಅರಿವಿದೆ ಎಂದು ರಾಕೇಶ್ ದೇವಯ್ಯ ತಿಳಿಸಿದ್ದಾರೆ.