Kodagu

ಕೊಡಗಿನ ತೋಟದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ: ಸಮಗ್ರ ತನಿಖೆಗೆ ಹಿಂದೂ ಜಾಗರಣ ವೇದಿಕೆ ಆಗ್ರಹ

admincoorgdaily

ಕೊಡಗಿನ ತೋಟದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ: ಸಮಗ್ರ ತನಿಖೆಗೆ ಹಿಂದೂ ಜಾಗರಣ ವೇದಿಕೆ ಆಗ್ರಹ
ಮಡಿಕೇರಿ: ಕೊಡಗಿನಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಪತ್ತೆಯಾಗಿದ್ದು, ಸಮಗ್ರ ತನಿಖೆ ನಡೆಸುವಂತೆ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಬೋಜೇಗೌಡ ಆಗ್ರಹಿಸಿದರು.

ಕೊಡಗು ಜಿಲ್ಲೆಯಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ದೇಶದಿಂದ ಹೊರಗಟ್ಟುವಂತೆ ಆಗ್ರಹಿಸಿ ಇತ್ತೀಚೆಗೆ ಜಿಲ್ಲೆಯಾದ್ಯಂತ ೧೨ ದಿನಗಳ ಕಾಲ ವಾಹನ ಜಾಥಾ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಜಿಲ್ಲಾಡಳಿತ ಕ್ರಮ ಕೈಗೊಳ್ಳದಿರುವುದನ್ನು ಸಾಬೀತುಪಡಿಸುವಂತೆ, ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟಿಗೇರಿಯ ತೋಟವೊಂದರಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಕಾರ್ಮಿಕರಾಗಿ ಸೇರಿಕೊಂಡಿರುವುದು ಪತ್ತೆಯಾಗಿದೆ. 
ಹಿಂದೂ ಜಾಗರಣ ವೇದಿಕೆ, ಆಟೋ ಚಾಲಕರ ಸಂಘ ಮತ್ತು ಸ್ಥಳೀಯ ಹಿಂದೂಪರ ಕಾರ್ಯಕರ್ತರ ತಂಡ ಆರೋಪಿಗಳನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದೆ. ಪಶ್ಚಿಮ ಬಂಗಾಳದ ಬ್ರೋಕರ್ ಮೂಲಕ ಭಾರತಕ್ಕೆ ಬಂದಿರುವುದಾಗಿ ಸ್ವತಃ ವಲಸಿಗರೇ ಬಾಯಿಬಿಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಒಟ್ಟು ನಾಲ್ವರು ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ. ಇದರಲ್ಲಿ ದಂಪತಿ ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ.ಪತ್ತೆಯಾಗಿರುವ ವಲಸಿಗರ ಬಳಿ ಬೆಂಗಳೂರು ನೋಂದಣಿಯ ದ್ವಿಚಕ್ರ ವಾಹನ ಇರುವುದು ಕಳವಳಕಾರಿಯಾಗಿದೆ. ಅಕ್ರಮವಾಗಿ ಗಡಿ ದಾಟಿ ಬಂದು ರಾಜಾರೋಷವಾಗಿ ಓಡಾಡಲು ಅವರನ್ನು ಸಾಕಿ ಸಲಹುತ್ತಿರುವವರ ಅಭಯವೇ ಕಾರಣ ಎಂದು ವೇದಿಕೆ ಆರೋಪಿಸಿದೆ.

ಅಕ್ರಮ ವಲಸಿಗರಿಂದ ದೇಶದ ಆಂತರಿಕ ಸುರಕ್ಷತೆಗೆ ಗಂಭೀರ ಅಪಾಯವಿದೆ. ಅವರನ್ನು ಕರೆತರುವ ಏಜೆಂಟರು ಮತ್ತು ಆಶ್ರಯ ನೀಡುವವರ ಮೇಲೂ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕು. ಪೊಲೀಸ್ ಇಲಾಖೆಯಲ್ಲಿ ಡಿಸಿಐಬಿ, ಇಂಟೆಲಿಜೆನ್ಸ್ ಸೈಬರ್ ಕ್ರೈಂ, ಸ್ಪೆಷಲ್ ಬ್ರಾಂಚ್, ಕ್ರೈಂ ಬ್ರಾಂಚ್, ವಿಲೇಜ್ ಬೀಟ್ ಸೇರಿದಂತೆ ಎಲ್ಲ ವ್ಯವಸ್ಥೆಗಳಿದ್ದರೂ ಅಕ್ರಮ ವಲಸಿಗರ ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ. ಇದನ್ನು ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಕೆಲವು ರಾಜಕೀಯ ಪಕ್ಷಗಳು ಓಟ್ ಬ್ಯಾಂಕ್‌ಗಾಗಿ ಮೌನ ವಹಿಸಿರುವುದರಿಂದ ದೇಶದಾದ್ಯಂತ ಎರಡು ಕೋಟಿಗೂ ಅಧಿಕ ಅಕ್ರಮ ವಲಸಿಗರು ಕಾನೂನುಬಾಹಿರವಾಗಿ ದಾಖಲೆ ಸೃಷ್ಟಿಸಿಕೊಂಡು ನೆಲೆಸಿದ್ದಾರೆ. ಜಿಲ್ಲಾಡಳಿತ ಕೂಡಲೇ ಕಾರ್ಯಾಚರಣೆ ನಡೆಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ದೇಶದ ಆಂತರಿಕ ಸುರಕ್ಷತೆಗಾಗಿ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆ ಸಹ ಸಂಯೋಜಕರಾದ ಸುನಿಲ್ ಮಾದಾಪುರ, ಯೋಗೇಶ್, ಅಲ್ಲುಮಾಡ ಶರತ್, ವಿವೇಕ್, ಕುಮಾರ್ ಇದ್ದರು.