Kodagu

ಆವಂಡಿ ಗ್ರಾಮದ ಕೋಟೆ ಅಬ್ಬಿ ಹೊಳೆಯಲ್ಲಿ ಅಕ್ರಮ ಮೀನುಗಾರಿಕೆ : ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

admincoorgdaily

ಆವಂಡಿ ಗ್ರಾಮದ ಕೋಟೆ ಅಬ್ಬಿ ಹೊಳೆಯಲ್ಲಿ ಅಕ್ರಮ ಮೀನುಗಾರಿಕೆ : ಕ್ರಮಕ್ಕೆ ಗ್ರಾಮಸ್ಥರ ಆಗ್ರಹ
ಮಡಿಕೇರಿ ಅ.27 : ಆವಂಡಿ ಗ್ರಾಮದ ಕೋಟೆ ಅಬ್ಬಿ ಜಲಪಾತ ಹಾಗೂ ಅದರ ಸುತ್ತಮುತ್ತಲಿನ ಹೊಳೆಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ನ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳಿಗೆ ಹಾಗೂ ಮೀನುಗಾರಿಕಾ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಅವಂಡಿ ಗ್ರಾಮದ ಕೋಟೆ ಅಬ್ಬಿ ಜಲಪಾತದ ಹೊಳೆಯಲ್ಲಿ ಅಳಿವಿನಂಚಿನಲ್ಲಿರುವ ಮಹಶೀರ್ (ಮರ ಮೀನು) ಹಾಗೂ ಹಾವು ಮೀನುಗಳಿದ್ದು, ಗ್ರಾಮಸ್ಥರು ಇವುಗಳನ್ನು ಸಂರಕ್ಷಿಸಿಕೊಂಡು ಬರುತ್ತಿದ್ದಾರೆ. ಆದರೆ, ಕಳೆದ ವರ್ಷದಿಂದ ಸುತ್ತಮುತ್ತಲಿನ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಅಸ್ಸಾಂ ಮೂಲದ ಕಾರ್ಮಿಕರು ರಾತ್ರಿ ವೇಳೆ ಬಲೆಗಳನ್ನು ಹಾಕಿ ಮೀನು ಹಿಡಿಯುತ್ತಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ತೋಟದ ಮಾಲೀಕರು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಆದ್ದರಿಂದ ಕೋಟೆ ಅಬ್ಬಿ ಜಲಪಾತದ ಸುತ್ತಮುತ್ತಲಿನ ತೋಟದ ಮಾಲೀಕರು ಹಾಗೂ ಸಂಬಂಧಪಟ್ಟ ಕಾರ್ಮಿಕರಿಗೆ ನೋಟಿಸ್ ನೀಡಿ, ಅಕ್ರಮವಾಗಿ ಮೀನು ಹಿಡಿಯಲು ಬಳಸುವ ಬಲೆಗಳನ್ನು ವಶಪಡಿಸಿಕೊಳ್ಳಬೇಕು. ಅಲ್ಲದೆ, ಇನ್ನು ಮುಂದೆ ಹೊಳೆಯಲ್ಲಿ ಅಕ್ರಮ ಮೀನುಗಾರಿಕೆ ನಡೆಯದಂತೆ ಸೂಕ್ತ ಕ್ರಮ ಕೈಗೊಂಡು ಜಲಚರಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಮನು ಮುದ್ದಪ್ಪ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.