Kodagu

ಕಸ್ತೂರಿ ರಂಗನ್ ವರದಿ ಅನುಷ್ಠಾನ:ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಕರಡು ಅಧಿಸೂಚನೆಯನ್ನು ವಿರೋಧಿಸಿ ಸೆ.11ರಂದು ಮಡಿಕೇರಿಯಲ್ಲಿ ಪ್ರತಿಭಟನೆ

admincoorgdaily

ಕಸ್ತೂರಿ ರಂಗನ್ ವರದಿ ಅನುಷ್ಠಾನ:ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಕರಡು ಅಧಿಸೂಚನೆಯನ್ನು ವಿರೋಧಿಸಿ ಸೆ.11ರಂದು ಮಡಿಕೇರಿಯಲ್ಲಿ ಪ್ರತಿಭಟನೆ
ಸೋಮವಾರಪೇಟೆ:ಕಸ್ತೂರಿ ರಂಗನ್ ವರದಿ ಅನುಷ್ಠಾನ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಕರಡು ಅಧಿಸೂಚನೆಯನ್ನು ವಿರೋಧಿಸಿ ಸೆ.11ರಂದು ಮಡಿಕೇರಿ ಗಾಂಧಿ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ತಿಳಿಸಿದ್ದಾರೆ.

ಕೊಡಗಿನ ರೈತರು ಹಾಗು ವಿವಿಧ ಸಂಘಸಂಸ್ಥೆಗಳ ಸಹಕಾರದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳಿಗ್ಗೆ 10.30 ಗಂಟೆಗೆ ಸುದರ್ಶನ ಸರ್ಕಲ್‌ನಲ್ಲಿ ರೈತರು ಸಮಾವೇಶಗೊಂಡು ನಂತರ ಮೆರವಣಿಗೆಯಲ್ಲಿ ಗಾಂಧಿ ಮೈದಾನಕ್ಕೆ ತೆರಳಿ, ಧರಣಿ ನಡೆಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಂಡರೆ, ಕೊಡಗಿನ 55 ಗ್ರಾಮಗಳ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಮೂಲ ನಿವಾಸಿಗಳ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಸೂಕ್ಷ್ಮ ಪರಿಸರ ವಲಯದ ವ್ಯಾಪ್ತಿ 10 ರಿಂದ 15 ಕಿ.ಮೀ ಇರಲಿದೆ. ಜಿಲ್ಲೆಯಲ್ಲಿರುವ ಮೀಸಲೂ ಅರಣ್ಯ ಪ್ರದೇಶದಿಂದ 15 ಕಿ.ಮೀ ವ್ಯಾಪ್ತಿಯಾದರೆ, ಬಹುತೇಕ ಗ್ರಾಮಗಳು ಸೂಕ್ಮ ಪರಿಸರ ವಲಯಕ್ಕೆ ಸೇರಲಿದೆ. ನಂತರ ರೈತರು ಬದುಕುವ ಹಕ್ಕನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಸೂಕ್ಷ್ಮ ಪರಿಸರ ವಲಯವನ್ನು ಪಶ್ಚಿಮಘಟ್ಟಕ್ಕೆ ಸೀಮಿತಗೊಳಿಸಿ, ವ್ಯಾಪ್ತಿಯನ್ನು ಶೂನ್ಯಗೊಳಿಸಿದರೆ, ರೈತರ ಅಕ್ಷೇಪಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ರೈತರಿಗೆ ಸಮಸ್ಯೆಯಿಲ್ಲ ಎಂದು  ಕೆಲವರು ಪರಿಸರ ಪ್ರೇಮಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ರೈತಾಪಿ ಜನರ ಮುಂದಿನ ಪೀಳಿಗೆಯ ಬದುಕನ್ನು ನಾಶ ಮಾಡಲು ಹೊರಟವರಿಗೆ ರೈತರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಸಮಿತಿಯ ಕಾನೂನು ಸಲಹೆಗಾರರಾದ ಬಿ.ಜೆ.ದೀಪಕ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಅನುಷ್ಠಾನದ 7ನೇ ಕರಡು ಅಧಿಸೂಚನೆಗೆ ಕೊಡಗಿನ ರೈತರು ತಕರಾರು ಸಲ್ಲಿಸದಿದ್ದರೆ, ರೈತರ ಒಪ್ಪಿಗೆ ಇದೆ ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರ 8ನೇ ಅಧಿಸೂಚನೆಯನ್ನೂ ಹೊರಡಿಸುವುದಿಲ್ಲ ಎಂದು ಹೇಳಿದರು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆಯನ್ನು ಕರೆಯುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ರೈತ ಹೋರಾಟ ಸಮಿತಿಯಿಂದ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಒಂದೇ ಒಂದು ಗ್ರಾಮಸಭೆಗಳನ್ನು ಅಧಿಕಾರಿಗಳು ಕರೆದಿಲ್ಲ ಎಂದು ದೂರಿದರು. 

ಕೇರಳ ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿರುದ್ಧ ಕಾನೂನು ಬದ್ದವಾಗಿ ಹೋರಾಟ ನಡೆಸಿ ಗೆಲವು ಸಾಧಿಸಿದ್ದಾರೆ. ಕರ್ನಾಟಕ ಸರ್ಕಾರವೂ ಕಾನೂನು ಬದ್ದವಾಗಿ ಕೇಂದ್ರ ಸರ್ಕಾರಕ್ಕೆ ತಕರಾರು ಸಲ್ಲಿಸಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ  ದಿವಾಕರ್ ಕೂತಿ, ಪೃಥ್ವಿ ಗೌಡಳ್ಳಿ, ಸಂಭ್ರಮ್ ಅಬ್ಬೂರುಕಟ್ಟೆ ಇದ್ದರು.