ಮುಗುಟಗೇರಿಯಲ್ಲಿ ಮಹತ್ವದ ತೀರ್ಮಾನ; 2027ರ ಏಪ್ರಿಲ್ನಲ್ಲಿ ಬೇಡು ಹಬ್ಬ
admincoorgdaily

ಪೊನ್ನಂಪೇಟೆ: ತಾಲೂಕಿನ ಮುಗುಟಗೇರಿ ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಶ್ರೀ ತೊಣಕೇರಿ ಭಗವತಿ ಮತ್ತು ಶ್ರೀ ಕುಟ್ಟಿಚಾತ ದೇವಸ್ಥಾನ ಸಮಿತಿಯ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಗ್ರಾಮದ ತೊಣಕೇರಿ ಭದ್ರಕಾಳಿ ಅಂಬಲದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನ ಸಮಿತಿ ಅಧ್ಯಕ್ಷ ಕಳ್ಳಿಚಂಡ ಶಂಭು ಪೂವಯ್ಯ ವಹಿಸಿದ್ದರು. ಸಭೆಯಲ್ಲಿ ಗ್ರಾಮದ ಅಭಿವೃದ್ಧಿ ಕಾರ್ಯಗಳು, ಧಾರ್ಮಿಕ ಆಚರಣೆಗಳು ಹಾಗೂ ದೇವಸ್ಥಾನಗಳ ಮುಂದಿನ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಗ್ರಾಮದ ಜನರನ್ನು ಒಗ್ಗೂಡಿಸಿ ಸಾಮೂಹಿಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಮಿತಿಯನ್ನು ಇನ್ನಷ್ಟು ಕ್ರಿಯಾಶೀಲಗೊಳಿಸುವ ಕುರಿತು ಚರ್ಚೆ ನಡೆಯಿತು.
ಈ ಹಿಂದೆ ‘ಮುಗುಟಗೇರಿ ಮರಣ ನಿಧಿ’ ಎಂಬ ಹೆಸರಿನಿಂದ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯನ್ನು ಇನ್ನು ಮುಂದೆ ‘ಮುಗುಟಗೇರಿ ಗ್ರಾಮಾಭಿವೃದ್ಧಿ ಸಮಿತಿ’ ಎಂದು ಮರುನಾಮಕರಣ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಮೂಲಕ ಸಮಿತಿಯ ವ್ಯಾಪ್ತಿಯನ್ನು ವಿಸ್ತರಿಸಿ ಗ್ರಾಮದಲ್ಲಿ ಸಾಮಾಜಿಕ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ತೀರ್ಮಾನಿಸಲಾಯಿತು.
ಅಲ್ಲದೆ, ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಗ್ರಾಮದ ಆರಾಧ್ಯ ದೇವರಾದ ಶ್ರೀ ಭದ್ರಕಾಳಿ ದೇವರ ಸಾಂಪ್ರದಾಯಿಕ ಬೇಡು ಹಬ್ಬವನ್ನು ಮುಂದಿನ 2027ರ ಏಪ್ರಿಲ್ ತಿಂಗಳಲ್ಲಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಹಬ್ಬವನ್ನು ಸಂಪ್ರದಾಯಬದ್ಧವಾಗಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸುವ ಕುರಿತು ಚರ್ಚಿಸಲಾಯಿತು.
ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಕಳ್ಳಿಚಂಡ ಶಂಭು ಪೂವಯ್ಯ ಮಾತನಾಡಿ, ಗ್ರಾಮದ ಧಾರ್ಮಿಕ ಸಂಪ್ರದಾಯ ಹಾಗೂ ದೇವತಾ ಕಾರ್ಯಗಳನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಅದರಲ್ಲೂ ಗ್ರಾಮದ ಯುವಕರು ದೇವರ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಮುಂದೆ ಬರಬೇಕು ಎಂದು ಹೇಳಿದರು. ಐನಂಡ ಕೆ ಮಂದಣ್ಣ ಪ್ರಾರ್ಥಿಸಿದರು. ಆಲೇಮಾಡ ನವೀನ್ ಸ್ವಾಗತಿಸಿದರು. ಚೀರಂಡ ಚಂಗಪ್ಪ ವಂದಿಸಿದರು. ಆಲೇಮಾಡ ಗಿಣಿ ನಾಣಯ್ಯ ಗಣಪತಿ ಹೋಮ ಮಾಡಿಸಿದರು. ಮುದ್ದಿಯಡ ಮಂಜು ಗಣಪತಿ ಊಟೋಪಚಾರ ವ್ಯವಸ್ಥೆಯನ್ನು ಮಾಡಿದರು.
ಈ ಸಂದರ್ಭ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಆಲೇಮಾಡ ನವೀನ್ ದೇವಯ್ಯ, ಕಾರ್ಯದರ್ಶಿಗಳಾದ ಮಲಚೀರ ಲೋಕೇಶ್, ಮುದ್ದಿಯಡ ನಿತೀನ್, ಖಜಾಂಚಿ ಐನಂಡ ಕೆ. ಮಂದಣ್ಣ ಸೇರಿದಂತೆ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಚಿತ್ರ ಶಿರ್ಷಿಕೆ 18ppt03, 18ppt04 ಮುಗುಟಗೇರಿ ಗ್ರಾಮಾಭಿವೃದ್ಧಿ ಸಮಿತಿಯ ವಾರ್ಷಿಕ ಮಹಾಸಭೆ