ಅಂತರ್ ಕೊಡವ ಸಮಾಜಗಳ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ
admincoorgdaily

ಪೊನ್ನಂಪೇಟೆ: ಕೊಡವ ಕ್ರಿಕೆಟ್ ಅಕಾಡೆಮಿ (ರಿ) ಕೊಡಗು ಇವರ ಆಯೋಜಕತ್ವದ ಅಂತರ್ ಕೊಡವ ಸಮಾಜಗಳ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭ ನಡೆಯಿತು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರು ಪಂದ್ಯಾಟವನ್ನು ಉದ್ಘಾಟಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟ ಒಬ್ಬ ಕ್ರಿಕೆಟ್ ಪಟುವಿನ ನೈಜ ಪ್ರತಿಭೆಯನ್ನು ತಿಳಿಸುತ್ತದೆ. ಕ್ರಿಕೆಟ್ ವೃತ್ತಿಯಲ್ಲಿ ಯಶಸ್ಸು ಕಾಣಲು ಲೆದರ್ ಬಾಲ್ ಕ್ರಿಕೆಟ್ ಆಡುವುದು ಎಷ್ಟು ಮುಖ್ಯವೋ, ಅದರ ಚಾಣಾಕ್ಷತೆಯನ್ನು ಬಳಸಿಕೊಳ್ಳುವುದು ಅಷ್ಟೇ ಮುಖ್ಯ. ಕೊಡವ ಕ್ರಿಕೆಟ್ ಅಕಾಡೆಮಿಯವರ ಈ ಪ್ರಯತ್ನ ಶ್ಲಾಘನೀಯವಾಗಿದ್ದು, ಸಮುದಾಯದ ಯುವಕ-ಯುವತಿಯರಿಗೆ ತಮ್ಮ ಕ್ರೀಡಾ ಭವಿಷ್ಯವನ್ನು ರೂಪಿಸಿಕೊಳ್ಳಲು ಅತ್ಯಂತ ಸಹಕಾರಿಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈಗಾಗಲೇ ಕೊಡವ ಸಮುದಾಯದ ಹಲವು ಯಶಸ್ವಿ ಕ್ರಿಕೆಟಿಗರು ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ. ಇಂತಹ ಬಹಳಷ್ಟು ಪ್ರತಿಭೆಗಳು ಈ ಕ್ರೀಡಾಕೂಟಗಳಿಂದ ಮೂಡಿಬರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕರ್ಸನ್ ಕಾರ್ಯಪ್ಪ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಅಧ್ಯಕ್ಷ ಕೋದಂಡ ಸೋಮಣ್ಣ, ಪಂಚಾಯತ್ ಮಾಜಿ ಸದಸ್ಯ ಅದೆಂಗಡ ವಿನು ಉತ್ತಪ್ಪ, ಪಕ್ಷದ ಮುಖಂಡರಾದ ಸುಬ್ಬಯ್ಯ, ಅಜ್ಜಿಕುಟ್ಟಿರ ಗಿರೀಶ್, ಮುಖ್ಯ ಅತಿಥಿಯಾಗಿ ಬಾಳಲೆ ಕೊಡವ ಸಮಾಜ ಅಧ್ಯಕ್ಷ ಬೋಸ್ ಚಿಟ್ಟಿಯಪ್ಪ, ಕೃಷ್ಣ ಗಣಪತಿ, ಸುಗುಣ ಗಣಪತಿ, ಪ್ರತಾಪ್ ಬೆಳ್ಳಿಯಪ್ಪ ಹಾಗೂ ಪ್ರಮುಖರು ಉಪಸ್ಥಿತರಿದ್ದರು.