ನಾಲ್ಕೇರಿ ಗ್ರಾಮದ ಬೊಮ್ಮಡು ಹಾಡಿಯಲ್ಲಿ ನೂತನ ಅಂಗನವಾಡಿ ಕೇಂದ್ರ ಲೋಕಾರ್ಪಣೆ
admincoorgdaily

ಪೊನ್ನಂಪೇಟೆ:ತಾಲೂಕಿನ ನಾಲ್ಕೇರಿ ಗ್ರಾಮದ ಬೊಮ್ಮಡು ಹಾಡಿಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅವರು ಇಂದು ಭೇಟಿ ನೀಡಿದರು.
ರೂ. 10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಅಂಗನವಾಡಿ ಕೇಂದ್ರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು.
ಬಳಿಕ ಸ್ಥಳೀಯರ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಅಂಗನವಾಡಿ ಕೇಂದ್ರವು ಪ್ರತಿ ಮಗುವಿನ ಭವಿಷ್ಯ ರೂಪಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಮಗು ಜನಿಸಿದ ಬಳಿಕ ಮನೆಯಿಂದ ಮೊದಲ ಬಾರಿಗೆ ವಿದ್ಯಾಭ್ಯಾಸಕ್ಕೆ ತೆರಳುವುದು ಅಂಗನವಾಡಿ ಕೇಂದ್ರಕ್ಕೆ. ಇಲ್ಲಿಯೇ ಮಗುವಿನ ವಿದ್ಯಾಭ್ಯಾಸದ ಪ್ರಥಮ ಘಟ್ಟ ಆರಂಭವಾಗುತ್ತದೆ. ಇಲ್ಲಿಯೇ ಪುಟಾಣಿ ಮಕ್ಕಳು ಸುತ್ತಮುತ್ತಲಿನ ಮಕ್ಕಳೊಂದಿಗೆ ಬೆರೆಯುವುದನ್ನು ಕಲಿಯಲು ಆರಂಭಿಸುತ್ತಾರೆ.
ಆದ್ದರಿಂದ ಪ್ರತಿ ಅಂಗನವಾಡಿ ಕೇಂದ್ರದ ಮೇಲ್ವಿಚಾರಕರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತಾರೆ. ವಿಶೇಷವಾಗಿ ದಿನನಿತ್ಯ ದುಡಿದು ಜೀವನ ಸಾಗಿಸುವ ಹಾಡಿಯ ಜನರಿಗೆ ಹಾಗೂ ಅವರ ಮಕ್ಕಳಿಗೆ ಇಂತಹ ಅಂಗನವಾಡಿ ಕೇಂದ್ರಗಳು ಭವಿಷ್ಯದ ಬಾಗಿಲು ತೆರೆಯುವ ಪ್ರಮುಖ ಕೇಂದ್ರವಾಗಿದೆ. ಪ್ರತಿ ಮಕ್ಕಳು ಅಂಗನವಾಡಿಯಲ್ಲಿ ಕಲಿತು ಮುಂದಿನ ವಿದ್ಯಾಭ್ಯಾಸದಲ್ಲಿ ಉತ್ತಮ ಅಂಕ ಗಳಿಸಿ ನಾಡಿನ ಸತ್ಪ್ರಜೆಗಳಾಗಿ ರೂಪಗೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಅಧ್ಯಕ್ಷ ತಿತೀರ ಕಟ್ಟಿ ಕಾರ್ಯಪ್ಪ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಕೆ.ಬಾಡಗ ವಲಯ ಅಧ್ಯಕ್ಷ ರವಿ, ಪಂಚಾಯತ್ ಮಾಜಿ ಅಧ್ಯಕ್ಷ ಸೋಮಯ್ಯ, ಪಕ್ಷದ ಮುಖಂಡರಾದ ಕೇಚಮಾಡ ಸಿದ್ದು ನಾಚಪ್ಪ, ಮಚ್ಚಮಡ ಮನು, ನಿಖಿಲ್, ಅಂಗನವಾಡಿ ಶಿಕ್ಷಕರು, ಸಿಬ್ಬಂದಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.