ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಪಂಚದಲ್ಲೇ ಅತ್ಯುನ್ನತ: ಶಾಸಕ ಡಾ.ಮಂತರ್ ಗೌಡ
admincoorgdaily

ಸೋಮವಾರಪೇಟೆ, ಸೆ.15: ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಪಂಚದಲ್ಲೇ ಅತ್ಯುನ್ನತ ಸ್ಥಾನದಲ್ಲಿದೆ ಎಂದು ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಕೊಡವ ಸಮಾಜದಲ್ಲಿ ಮಂಗಳವಾರ ನಡೆದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದಿದ್ದರೆ ನಾವೆಲ್ಲರೂ ರಾಜಪ್ರಭುತ್ವದ ವ್ಯವಸ್ಥೆಯಲ್ಲಿ ಬದುಕಬೇಕಾಗಿತ್ತು. ಮೂಲಭೂತ ಹಕ್ಕುಗಳಿಂದಲೂ ವಂಚಿತರಾಗಬೇಕಾಗಿತ್ತು. ದೇಶದ ಸಂವಿಧಾನ ಪ್ರಜೆಗಳಿಗೆ ಸಮಾನವಾಗಿ ಬದುಕುವ ಹಕ್ಕು ಕೊಟ್ಟಿದೆ. ವ್ಯಕ್ತಿ ಸ್ವಾತಂತ್ರ್ಯದೊಂದಿಗೆ ಪ್ರಶ್ನೆ ಮಾಡುವ ಹಕ್ಕನ್ನು ನಾವೆಲ್ಲರೂ ಗಳಿಸಿಕೊಂಡಿದ್ದೇವೆ. ಮುಂದೆಯೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಆಗದಂತೆ ಯುವ ಸಮುದಾಯ ಕಾವಲು ಕಾಯಬೇಕಿದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಮಾತನಾಡಿ, ಚುನಾವಣೆಗಳಲ್ಲಿನ ಭ್ರಷ್ಟಾಚಾರವನ್ನು ಹೋಗಲಾಡಿಸಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ. ಒಂದು ಓಟು, ಒಂದು ಮೌಲ್ಯ ಎಂಬ ತತ್ವದಡಿಯಲ್ಲಿ ಎಲ್ಲರೂ ಸಕ್ರಿಯವಾಗಿ ಮತದಾನದಲ್ಲಿ ಪಾಲ್ಗೊಂಡು ವ್ಯವಸ್ಥೆ ಬಲಿಷ್ಠವಾಗಲು ಸಹಕರಿಸಬೇಕು ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಕುಶಾಲನಗರ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಪ್ರಜಾಪ್ರಭುತ್ವ ಮೌಲ್ಯಗಳು ಎಲ್ಲ ಜನರ ಬದುಕಿಗೆ ಉತ್ತಮ ದಾರಿದೀಪ. ಪ್ರಜಾಪ್ರಭುತ್ವ ವಿರೋಧಿಗಳು ಇದನ್ನು ನಾಶಪಡಿಸಲು ಹೊಂಚು ಹಾಕುತ್ತಿದ್ದಾರೆ. ಈ ಸಮಯದಲ್ಲಿ ಯುವ ಸಮುದಾಯ ಜಾಗೃತರಾಗಬೇಕು ಎಂದರು.
ವೇದಿಕೆಯಲ್ಲಿ ಗ್ಯಾರಂಟಿ ಸಮಿತಿ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕಾಂತರಾಜು, ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡ ಜಯಪ್ಪ ಹಾನಗಲ್, ಸೂಡಾ ಅಧ್ಯಕ್ಷ ಕೆ.ಎಂ.ಆದಂ, ತಹಶೀಲ್ದಾರ್ ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಪ್ರಮುಖರಾದ ಬಿ.ಇ.ಜಯೇಂದ್ರ, ಟಿ.ಇ.ಸುರೇಶ್, ಡಿ.ಎಸ್.ನಿರ್ವಾಣಪ್ಪ, ಹೊನ್ನಪ್ಪ, ಮೊಹಿನಿ, ರುದ್ರಪ್ಪ, ಪುಟ್ಟರಾಜು, ಗುರುಸ್ವಾಮಿ ಇದ್ದರು. ವಿದ್ಯಾರ್ಥಿಗಳಿಗೆ ಇವಿಎಂ ಮೂಲಕ ಮತದಾನದ ಬಗ್ಗೆ ಮಾಹಿತಿ ನೀಡಿ ಮತದಾನ ಮಾಡಿಸಲಾಯಿತು.