Kodagu

ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದಿರಾಗಾಂಧಿ ಜನ್ಮದಿನಾಚರಣೆ

admincoorgdaily

ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದಿರಾಗಾಂಧಿ ಜನ್ಮದಿನಾಚರಣೆ
ಮಡಿಕೇರಿ: ಜಗತ್ತು ಕಂಡ ಅತ್ಯಂತ ಉತ್ಕೃಷ್ಟ ಆಡಳಿತಗಾರ್ತಿಯರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಪ್ರಮುಖರಾಗಿದ್ದಾರೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರು ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ತೆನ್ನಿರ ಮೈನಾ ಬಣ್ಣಿಸಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಇಂದಿರಾಗಾಂಧಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಇಂದಿರಾಗಾಂಧಿಯವರ ಸುಮಾರು 15 ವರ್ಷಗಳ ಆಡಳಿತಾವಧಿಯಲ್ಲಿ ಇತರ ದೇಶಗಳ ಮೇಲೆ ಅವಲಂಬಿತವಾಗಿದ್ದ ಭಾರತ ಸ್ವಾವಲಂಬಿ ರಾಷ್ಟ್ರವಾಗಿ ರೂಪುಗೊಂಡಿತು ಎಂದು ಹೇಳಿದರು.

ಪಾಕಿಸ್ತಾನದೊಂದಿಗೆ ನಡೆದ 1971ರ ಯುದ್ಧದಲ್ಲಿ ಕೇವಲ 13 ದಿನಗಳಲ್ಲಿ ಪಾಕಿಸ್ತಾನದ ಸೇನೆಯನ್ನು ಶರಣಾಗುವಂತೆ ಮಾಡುವ ಮೂಲಕ ಭಾರತವನ್ನು ಜಗತ್ತಿನ ಬಲಿಷ್ಠ ರಾಷ್ಟ್ರವಾಗಿ ಗುರುತಿಸುವಂತೆ ಮಾಡಿದ ಕೀರ್ತಿ ಇಂದಿರಾಗಾಂಧಿಯವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮಾತನಾಡಿ, ಇಂದಿರಾಗಾಂಧಿಯವರು ಪ್ರಧಾನಮಂತ್ರಿಯಾಗಿ ದೇಶಕ್ಕೆ ನೀಡಿದ ಕೊಡುಗೆಗಳಿಂದ ಭಾರತ ಇಂದು ಉತ್ತಮ ಸ್ಥಿತಿಯಲ್ಲಿದೆ. ಭಾರತೀಯರು ನೆಮ್ಮದಿಯ ಜೀವನ ನಡೆಸಲು ಅವರ ಆಡಳಿತಾವಧಿಯ ಅಭಿವೃದ್ಧಿಪರ ಯೋಜನೆಗಳು ಮಹತ್ವದ ಕೊಡುಗೆ ನೀಡಿವೆ ಎಂದು ಹೇಳಿದರು. ಇಂದಿರಾಗಾಂಧಿಯವರ ಅಭಿವೃದ್ಧಿಪರ ಯೋಜನೆಗಳ ಫಲವನ್ನು ಇಂದಿಗೂ ಕಾಣಬಹುದಾಗಿದೆ ಎಂದರು.

ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿ ಮಾತನಾಡಿ, ಧೀಮಂತ ನಾಯಕಿ ಇಂದಿರಾಗಾಂಧಿಯವರು ದೇಶದ ಎಲ್ಲಾ ಮಹಿಳೆಯರಿಗೆ ಪ್ರೇರಣಾಶಕ್ತಿಯಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ. ಸುರೇಶ್, ಸೇವಾದಳ ಜಿಲ್ಲಾಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಕವನ್ ಕೊತ್ತೋಳಿ, ಮಹಿಳಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಫ್ಯಾನ್ಸಿ ಪಾರ್ವತಿ ಹಾಗೂ ಬೊಳ್ಳಿಯಂಡ ಗಣೇಶ್ ಮಾತನಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಸಂತಿ ಬಿ., ಪೌರಕಾರ್ಮಿಕ ಮಹಿಳೆ ಡಿ. ಲಕ್ಷ್ಮಿ ಹಾಗೂ ಆಟೋ ಚಾಲಕಿ ಜಯಮೇರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪುದಿಯನೆರವನ ರೇವತಿ ಹಾಗೂ ಲೀಲಾ ಶೇಷಮ್ಮ ಸನ್ಮಾನಿತರ ಪರಿಚಯ ಮಾಡಿಕೊಟ್ಟರು.

ಇಂದಿರಾಗಾಂಧಿಯವರ ಜನ್ಮದಿನದ ಅಂಗವಾಗಿ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ನಗರಸಭಾ ಅಧ್ಯಕ್ಷೆ ಜುಲೇಖಾಬಿ, ಮಮ್ತಾಜ್ ಬೇಗಂ, ಯುವ ಕಾಂಗ್ರೆಸ್ ನಗರಾಧ್ಯಕ್ಷ ಅರ್ಜುನ್, ಮೈಕಲ್ ಮಾರ್ಷಲ್, ಹಸೇನ್, ಶೇಖ್ ಅಹಮದ್, ಧನಲಕ್ಷ್ಮಿ, ತಾಜುನ್ನಿಸಾ, ಹರಿಣಾಕ್ಷಿ, ಪುಷ್ಪ, ರೀನಾ, ಅಪ್ರೋಸ್, ಸುನಂದ, ಅನು, ವಿಮಲ, ಪ್ರೇಮಾ ನಿಂಗಪ್ಪ, ನಾಗರತ್ನ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರೇಮಾ ಕೃಷ್ಣಪ್ಪ ಪ್ರಾರ್ಥಿಸಿದರು. ಮೂಡಾ ಸದಸ್ಯೆ ಮೀನಾಜ್ ಪ್ರವೀಣ್ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ದಿನೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪವಿತ್ರಾ ವಂದಿಸಿದರು.