ಬೆಟೋಳಿ ಗ್ರಾಮದಲ್ಲಿ ಜೇನು ಕೃಷಿ ಕುರಿತು ಮಾಹಿತಿ ಕಾರ್ಯಕ್ರಮ
admincoorgdaily

ವಿರಾಜಪೇಟೆ: ಬೆಟೋಳಿ ಗ್ರಾಮದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪುದುಪಾಡಿ ಅಯ್ಯಪ್ಪ ದೇವಾಲಯದ ಸಭಾಭವನದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವತಿಯಿಂದ ನಡೆಯುತ್ತಿರುವ ಕಾರ್ಯಾನುಭವ ಶಿಬಿರದ ವತಿಯಿಂದ ಜೇನು ಕೃಷಿ ಕುರಿತು ಮಾಹಿತಿ ಕಾರ್ಯಕ್ರಮವು ಶನಿವಾರ ನಡೆಯಿತು .
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೀಟಶಾಸ್ತ್ರಜ್ಞ. ಹಾಗೂ ಜೇನು ಕೃಷಿ ತಜ್ಞರಾದ ಆರ್.ಎನ್. ಕೆಂಚಾರೆಡ್ಡಿ, ಭಾಗವಹಿಸಿ ರೈತರಿಗೆ ಜೇನು ಸಾಕಾಣಿಕೆ, ನಿರ್ವಹಣೆ, ಆದಾಯ ಹಾಗೂ ಜೇನು ಕೃಷಿಯಿಂದ ದೊರೆಯುವ ನೇರ ಮತ್ತು ಪರೋಕ್ಷ ಪ್ರಯೋಜನಗಳ ಕುರಿತು ಮಾಹಿತಿ ನೀಡುತ್ತ ಜೇನು ಕೃಷಿಯನ್ನು ಕಡಿಮೆ ಬಂಡವಾಳದಲ್ಲಿ ಪೂರಕ ಕೃಷಿ ಚಟುವಟಿಕೆಯಾಗಿ ಅಳವಡಿಸಿಕೊಳ್ಳಬಹುದು. ಜೇನು ಪೆಟ್ಟಿಗೆಗಳ ಸ್ಥಾಪನೆ, ಜೇನು ಕುಟುಂಬಗಳ ನಿರ್ವಹಣೆ, ಜೇನುನೊಣಗಳ ಆರೋಗ್ಯ ರಕ್ಷಣೆ, ಆಹಾರ ವ್ಯವಸ್ಥೆ ಹಾಗೂ ಜೇನು ಸಂಗ್ರಹಣೆಯ ವೈಜ್ಞಾನಿಕ ವಿಧಾನಗಳ ಬಗ್ಗೆ ರೈತರಿಗೆ ತಿಳಿಸಿದ ಅವರು ಮುಂದುವರೆದು ಜೇನು ಕೃಷಿಯಿಂದ ಜೇನುತುಪ್ಪದ ಜೊತೆಗೆ ಜೇನುಮೇಣ, ಪ್ರೋಪೋಲಿಸ್, ರಾಯಲ್ ಜೆಲ್ಲಿ ಮುಂತಾದ ಉಪ ಉತ್ಪನ್ನಗಳ ಮೂಲಕವೂ ಹೆಚ್ಚುವರಿ ಆದಾಯ ಗಳಿಸಬಹುದು. ಜೇನುನೊಣಗಳ ಪರಾಗಸ್ಪರ್ಶ ಕ್ರಿಯೆಯಿಂದ ಬೆಳೆಗಳ ಉತ್ಪಾದಕತೆ ಹೆಚ್ಚುವುದರಿಂದ ಜೇನು ಕೃಷಿಯು ರೈತರಿಗೆ ನೇರ ಆದಾಯದ ಜೊತೆಗೆ ಕೃಷಿಯಲ್ಲಿ ಪರೋಕ್ಷ ಆರ್ಥಿಕ ಪ್ರಯೋಜನವನ್ನು ನೀಡುತ್ತದೆ. ಪರಾಗಸ್ಪರ್ಶದ ಪರಿಣಾಮವಾಗಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಇಳುವರಿ ಸುಮಾರು 20–25% ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಕೊಡಗಿನ ಜೇನುತುಪ್ಪದ ವಿಶೇಷತೆ ಮತ್ತು ಮೌಲ್ಯದ ಬಗ್ಗೆಯೂ ಮಾಹಿತಿ ನೀಡುತ್ತ. ಕೊಡಗಿನ ವೈವಿಧ್ಯಮಯ ಅರಣ್ಯ, ಕಾಫಿ ತೋಟಗಳು, ಏಲಕ್ಕಿ ಹಾಗೂ ವಿವಿಧ ಹೂವಿನ ಸಸ್ಯಗಳಿಂದ ಜೇನುನೊಣಗಳು ಮಕರಂದ ಸಂಗ್ರಹಿಸುವುದರಿಂದ ಕೊಡಗಿನ ಜೇನುತುಪ್ಪವು ವಿಶಿಷ್ಟ ರುಚಿ, ಸುವಾಸನೆ ಮತ್ತು ಗುಣಲಕ್ಷಣಗಳನ್ನು ಹೊಂದಿರುತ್ತದೆ. ಇದಕ್ಕೆ ಗುಣಮಟ್ಟದ ಪ್ಯಾಕಿಂಗ್, ಬ್ರ್ಯಾಂಡಿಂಗ್ ಮತ್ತು ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಜೇನು ಕೃಷಿಕರಿಗೆ ಉತ್ತಮ ಮೌಲ್ಯ ಹಾಗೂ ಹೆಚ್ಚುವರಿ ಆದಾಯ ದೊರೆಯುವ ಅವಕಾಶವಿದೆ ಎಂದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಸತ್ಯಮೂರ್ತಿ , ಎಂ.ಆರ್.ಉದಯ , ಸೂರಜ್ , ವಸಂತ , ರಾಮಶರ್ಮ, ಸೀತಾ , ಸುಮಿತ್ರಾ ಬಾಯಿ, ಭವ್ಯ , ಸುಬ್ರಮಣಿ , ಅಶೋಕ ಉಪಸ್ಥಿತರಿದ್ದರು.