Kodagu

ಜಿಲ್ಲಾ ಪಂಚಾಯಿತಿ ಮೀಸಲಾತಿಯಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯ: ಅಶ್ರಫ್ ಎಂ.ಇ. ಆಕ್ರೋಶ

admincoorgdaily

ಅಶ್ರಫ್
ಸೋಮವಾರಪೇಟೆ: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿಚಾರದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂಬ ಗಂಭೀರ ಆಕ್ಷೇಪ ವ್ಯಕ್ತವಾಗಿದೆ.

ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಪ್ರಬಲವಾಗಿರುವ ಐದು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಮೀಸಲಾತಿ ಕಲ್ಪಿಸಬೇಕಿತ್ತು. ಆದರೆ, ಸೂಕ್ತ ಪ್ರಾತಿನಿಧ್ಯ ದೊರೆಯದ ರೀತಿಯಲ್ಲಿ ಮೀಸಲಾತಿ ನಿಗದಿಯಾಗಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಸೋಮವಾರಪೇಟೆಯ ಅಶ್ರಫ್ ಎಂ.ಇ. ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"99 ಪರ್ಸೆಂಟ್ ಮತ ಚಲಾಯಿಸಿ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟ ಅಲ್ಪಸಂಖ್ಯಾತರಿಗೆ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಅವಕಾಶವೇ ಕಡಿಮೆಯಾಗುವಂತಾದರೆ ಇದಕ್ಕಿಂತ ದೊಡ್ಡ ಅನ್ಯಾಯ ಮತ್ತೇನಿದೆ?" ಎಂದು ಅವರು ಪ್ರಶ್ನಿಸಿದ್ದಾರೆ.

ಮತದಾನದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಮತಗಳು ಬೇಕು, ಆದರೆ ಜನಪ್ರತಿನಿಧಿಗಳಾಗುವ ಅವಕಾಶ ಕಲ್ಪಿಸುವಾಗ ಪ್ರಾತಿನಿಧ್ಯಕ್ಕೆ ಆದ್ಯತೆ ನೀಡಬಾರದೇ? ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಸಮುದಾಯಕ್ಕೂ ನ್ಯಾಯಸಮ್ಮತವಾದ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು. ಮೀಸಲಾತಿ ನಿಗದಿಪಡಿಸುವಾಗ ಜನಸಂಖ್ಯೆ, ನಿಯಮಗಳು ಮತ್ತು ಸಾಮಾಜಿಕ ನ್ಯಾಯದ ಅಂಶಗಳನ್ನು ಪಾರದರ್ಶಕವಾಗಿ ಪರಿಗಣಿಸಬೇಕು.

ಅಲ್ಪಸಂಖ್ಯಾತರ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಸಂಬಂಧಪಟ್ಟ ಅಧಿಕಾರಿಗಳು ಮರುಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕು ಹಾಗೂ ಮೀಸಲಾತಿ ನಿಗದಿಯ ಮಾನದಂಡಗಳನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು.

"ಮತ ನೀಡಿದ ಜನರಿಗೆ ರಾಜಕೀಯ ಪ್ರಾತಿನಿಧ್ಯವೂ ದೊರೆಯಬೇಕು. ಅಲ್ಪಸಂಖ್ಯಾತರ ಹಕ್ಕು ಮತ್ತು ನ್ಯಾಯಸಮ್ಮತ ಪ್ರಾತಿನಿಧ್ಯದ ವಿಚಾರದಲ್ಲಿ ಯಾರೂ ನಿರ್ಲಕ್ಷ್ಯ ವಹಿಸಬಾರದು. ಈ ಅನ್ಯಾಯದ ವಿರುದ್ಧ ನಮ್ಮ ಧ್ವನಿ ಮುಂದುವರಿಯಲಿದೆ" ಎಂದು ಅಶ್ರಫ್ ಎಂ.ಇ. ತಿಳಿಸಿದ್ದಾರೆ.