ಅಂತರಾಷ್ಟ್ರೀಯ ಕ್ರೀಡಾಪಟು ಕಾಳಪಂಡ ಬೋಪಯ್ಯ ದಂಪತಿಗೆ ಗೌರವ ಸನ್ಮಾನ
admincoorgdaily

ಪೊನ್ನಂಪೇಟೆ, ನ 22: ಕೊಡಗಿನ ಹೆಮ್ಮೆಯ ಅಂತಾರಾಷ್ಟ್ರೀಯ ಎತ್ತರ ಜಿಗಿತ (ಹೈಜಂಪ್) ಕ್ರೀಡಾಪಟು, ನಿವೃತ್ತ ಸೇನಾಧಿಕಾರಿ ಹಾಗೂ ಚಲನಚಿತ್ರ ನಟ ಕಾಳಪಂಡ ಎಂ. ಬೋಪಯ್ಯ (ಬೆಲ್ಲು) ಮತ್ತು ಅವರ ಧರ್ಮಪತ್ನಿ ಕೆ.ಬಿ. ರಾಣಿ ದಂಪತಿಯನ್ನು ಫೆಡರೇಷನ್ ಆಫ್ ಕೊಡವ ಸಮಾಜದ ವತಿಯಿಂದ ಕೊಡವ ನಮ್ಮೆ ಅಂಗವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಬಾಳುಗೋಡಿನಲ್ಲಿ ನಡೆದ ವೀರ ಯೋಧರ ಸ್ಮಾರಕ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೋಪಯ್ಯ ಅವರನ್ನು, ಕ್ರೀಡಾ ಕ್ಷೇತ್ರ, ಭಾರತೀಯ ಸೇನೆ ಹಾಗೂ ಚಿತ್ರರಂಗಕ್ಕೆ ಸಲ್ಲಿಸಿದ ಗಣನೀಯ ಕೊಡುಗೆಗಳನ್ನು ಪರಿಗಣಿಸಿ ಗೌರವಿಸಲಾಯಿತು.
1995ರಲ್ಲಿ 2.11 ಮೀಟರ್ ಎತ್ತರ ಜಿಗಿದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ಅವರು, 1997ರ ದಕ್ಷಿಣ ಏಷ್ಯನ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದರು. ಅಲ್ಲದೆ, ಭಾರತೀಯ ಸೇನೆಯಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು, 'ನಾಡ ಪೆದ ಆಶ' ಚಿತ್ರದ ಮೂಲಕ ಚಿತ್ರರಂಗದಲ್ಲಿಯೂ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಫೆಡರೇಷನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಮಲ್ಲೇಂಗಡ ದಾದಾ ಬೆಳ್ಳಿಯಪ್ಪ, ಸರ್ಕಂಡ ಸೋಮಣ್ಣ ಸೇರಿದಂತೆ ವಿವಿಧ ಕೊಡವ ಸಮಾಜಗಳ ಅಧ್ಯಕ್ಷರು, ಮಹಿಳೆಯರು, ಕ್ರೀಡಾ ಸಮಿತಿಯ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.