Kodagu

ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿ ಕಾರ್ಯಾಗಾರ

admincoorgdaily

ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿ ಕಾರ್ಯಾಗಾರ
ಮಡಿಕೇರಿ:-ಕೊಡಗು ಜಿಲ್ಲೆಯ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ಸರ್ಕಾರಿ ಸಿ ವೃಂದದ ನೌಕರರು ಮತ್ತು ಅಧಿಕಾರಿಗಳಿಗೆ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿ ಕಾರ್ಯಗಾರ ನಡೆಯಿತು.  

ಪ್ರಾಚಾರ್ಯರಾದ ಮಾದಪ್ಪ ಬಿ, ತರಬೇತಿಯ ಉದ್ಘಾಟಕರಾಗಿ ಭಾಗವಹಿಸಿದ್ದ ಜಿಲ್ಲಾ ಪ್ರಾವಾಸೋದ್ಯಮ ಇಲಾಖೆಯ ಹಿರಿಯ ಪ್ರವಾಸಿ ಪ್ರವರ್ತಕರಾದ ಸಂದೇಶ ಎಮ್.ಡಿ. ಹಾಗೂ ಜಿಲ್ಲಾ ಸಾಮಾಜಿಕ ಅರಣ್ಯ ವಲಯದ ಉಪ ಅರಣ್ಯಾಧಿಕಾರಿ ಗಣೇಶ ಎಮ್. ಹಾಗೂ ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ಕರ್ನಾಟಕ ಕೇಂದ್ರದ ಡಾ.ಸಿದ್ದರಾಮ ಎಚ್.ಎಮ್ ಅವರು ತರಬೇತಿಯ ಸಂಯೋಜಕರು ಮತ್ತು ಬೋಧಕರಾಗಿ ಭಾಗವಹಿಸಿದ್ದರು.
ಜಿಲ್ಲಾ ಪ್ರಾವಾಸೋದ್ಯಮ ಇಲಾಖೆಯ ಹಿರಿಯ ಪ್ರವಾಸಿ ಪ್ರವರ್ತಕರಾದ ಸಂದೇಶ ಎಂ.ಡಿ. ಅವರು ತರಬೇತಿ ಉದ್ಘಾಟಿಸಿ ಮಾತನಾಡಿ, ಪಶ್ಚಿಮ ಘಟ್ಟಗಳ ಮಡಿಲಿನಲ್ಲಿನ ಮಡಿಕೇರಿಯ ಬೆಟ್ಟಗುಡ್ಡಗಳು, ಹಸಿರು ಕಾಡುಗಳು, ಕಾಫಿ ತೋಟಗಳು ಮತ್ತು ತಂಪಾದ ಹವಾಮಾನ ಇದರ ಆಕರ್ಷಣೆ ಹೆಚ್ಚಿಸಿವೆ ಎಂದರು. 

ತಲಕಾವೇರಿ ಬ್ರಹ್ಮಗಿರಿ ಬೆಟ್ಟದಲ್ಲಿರುವ ಪವಿತ್ರ ಕ್ಷೇತ್ರವಾಗಿದ್ದು, ಕಾವೇರಿ ನದಿಯ ಉಗಮಸ್ಥಾನವೆಂದು ಪ್ರಸಿದ್ಧವಾಗಿದೆ. ಇಲ್ಲಿನ ಅರಣ್ಯಗಳು ಆನೆ, ಜಿಂಕೆ, ಕಾಡೆಮ್ಮೆ, ಚಿರತೆ ಹಾಗೂ ಅನೇಕ ಪಕ್ಷಿಗಳಿಗೆ ಆಶ್ರಯ ನೀಡುತ್ತವೆ. ಈ ಜೀವವೈವಿಧ್ಯ ಮತ್ತು ಜಲಸಂಪನ್ಮೂಲಗಳನ್ನು ಉಳಿಸುವುದು ಎಲ್ಲರ ಕರ್ತವ್ಯ. ಪ್ರವಾಸೋದ್ಯಮವು ಸ್ಥಳೀಯರಿಗೆ ಉದ್ಯೋಗ ಒದಗಿಸುವುದರ ಜೊತೆಗೆ ಆರ್ಥಿಕತೆಯನ್ನು ಬಲಪಡಿಸುತ್ತದೆ. ಆದರೆ ಅಭಿವೃದ್ಧಿಯು ಪ್ರಕೃತಿಗೆ ಹಾನಿ ಮಾಡದಂತೆ ನೋಡಿಕೊಳ್ಳಬೇಕು. ತರಬೇತಿಯಲ್ಲಿ ಅಧಿಕಾರಿಗಳಿಗೆ ಸುಸ್ಥಿರ ಅಭಿವೃದ್ಧಿಯ ಗುರಿಗಳು ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಲಾಯಿತು. 

ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆ, ಕಸ ನಿಯಂತ್ರಣ, ನೀರಿನ ಮಿತವ್ಯಯ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮ ಅಗತ್ಯ. ಇಲಾಖೆಗಳ ಸಮನ್ವಯ ಹಾಗೂ ಜನಸಹಭಾಗಿತ್ವದಿಂದ ಗುರಿಗಳನ್ನು ಸಾಧಿಸಬಹುದು. ಪ್ರಕೃತಿಯ ಸೌಂದರ್ಯವನ್ನು ಕಾಪಾಡಿ, ಸ್ಥಳೀಯ ಸಂಸ್ಕøತಿಗೆ ಗೌರವ ನೀಡಿ, ಭವಿಷ್ಯದ ಪೀಳಿಗೆಗೆ ಹಸಿರು ಕೊಡಗನ್ನು ಉಳಿಸೋಣ.

ತರಬೇತಿಯ ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಬೋಧಕರಾಗಿ ಆಗಮಿಸಿದ ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರುಗಳು ಕೇಂದ್ರದ ಬೋಧಕರಾದ ಡಾ.ಸಿದ್ದರಾಮ ಎಚ್.ಎಮ್ ಅವರು ಮಾತನಾಡಿ ಮಡಿಕೇರಿಯು ಕರ್ನಾಟಕದ ಅತ್ಯಂತ ಸುಂದರ ಮತ್ತು ಪ್ರಕೃತಿ ಸಂಪತ್ತಿನಿಂದ ಸಮೃದ್ಧವಾದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ ಎಂದರು.  

ಪಶ್ಚಿಮಘಟ್ಟದ ಹಸಿರು ಬೆಟ್ಟಗಳು, ಮಂಜಿನಿಂದ ಆವೃತವಾದ ಕಣಿವೆಗಳು, ಜಲಪಾತಗಳು ಹಾಗೂ ಕಾಫಿ ತೋಟಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ರಾಜಾಸೀಟ್, ಅಬ್ಬಿ ಜಲಪಾತ, ಇರ್ಪು ಜಲಪಾತ, ಮಾಂದಲ್‍ಪಟ್ಟಿ, ದುಬಾರೆ ಆನೆ ಶಿಬಿರ ಮತ್ತು ತಲಕಾವೇರಿ ಪ್ರಕೃತಿಯ ಸೊಬಗನ್ನು ಪ್ರತಿಬಿಂಬಿಸುವ ಪ್ರಮುಖ ಸ್ಥಳಗಳಾಗಿವೆ ಎಂದು ನುಡಿದರು.

ಈ ಪ್ರದೇಶವು ವೈವಿಧ್ಯಮಯ ವನ್ಯಜೀವಿಗಳಿಗೆ ಆಶ್ರಯವಾಗಿದ್ದು, ಜೀವವೈವಿಧ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪ್ರಕೃತಿ ಸೌಂದರ್ಯ, ಹಿತಕರ ಹವಾಮಾನ ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮದಿಂದ ಮಡಿಕೇರಿ ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದರಿಂದ ಸ್ಥಳೀಯ ಜನರಿಗೆ ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿಗೆ ಉತ್ತಮ ಅವಕಾಶಗಳು ಸೃಷ್ಟಿಯಾಗುತ್ತವೆ ಎಂದು ತಿಳಿಸಿದರು.

ಜಿಲ್ಲಾ ಸಾಮಾಜಿಕ ಅರಣ್ಯ ವಲಯದ ಉಪ ಅರಣ್ಯಾಧಿಕಾರಿ ಗಣೇಶ ಎಮ್. ಅವರು ತರಬೇತಿ ಉದ್ಘಾಟಿಸಿ ಮಾತನಾಡಿ, ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳು ಮತ್ತು ಮಾನವ ಸಂಘರ್ಷ, ವನ್ಯಜೀವಿಗಳ ಆವಾಸಸ್ಥಾನಗಳಲ್ಲಿ ಬದಲಾವಣೆ ಮಾಡುತ್ತಿರುವುದು ಅಭಿವೃದ್ಧಿಯ ಹೆಸರಿನಲ್ಲಿ ಪರಿಸರವನ್ನು ಹಾಳು ಮಾಡುತ್ತಿರುವುದು ಮತ್ತು ಅರಣ್ಯಗಳಲ್ಲಿ ವಲಸಿ ತಳಿಗಳ ಅತೀಕ್ರಮಣಕಾರಿಯಿಂದಾಗಿ ಸಸ್ಯವರ್ಗ, ವನ್ಯಜೀವಿಗಳು ಮತ್ತು ಕಾಡಿನ ಪರಿಸರದಲ್ಲಿ ವೈಪರೀತ್ಯಗಳು ಉಂಟಾಗಲು ಕಾರಣವಾಗುತ್ತಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು, ಉಪ-ಪ್ರಾಚಾರ್ಯರು, ಬೋಧಕರುಗಳು, ಕಚೇರಿಯ ಅಧಿಕಾರಿಗಳು, ಸಿಬ್ಬಂದಿಯವರು ಮತ್ತು ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರ ವ್ಯಾಪ್ತಿಯ ವಿವಿಧ ಇಲಾಖೆಗಳ 30 ಜನ ಸಿ ವೃಂದದ ನೌಕರು ಮತ್ತು ಸಿಬ್ಬಂದಿಗಳು ಸುಸ್ಥಿರ ಅಭಿವೃದ್ಧಿ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು. 

ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರುಗಳು ಕೇಂದ್ರದ ಬೋಧಕರಾದ ಡಾ.ಸಿದ್ದರಾಮ ಎಚ್.ಎಮ್ ಅವರು ತರಬೇತಿಯ ಸಂಯೋಜಕರಾಗಿ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದಂತೆ ಉಪನ್ಯಾಸ ನೀಡಿದರು. ತರಬೇತಿ ಬೋಧಕರಾದ ಪ್ರತಾಪ ಕುಮಾರ ಎನ್. ಅವರು ಮಾತನಾಡಿದರು.