Kodagu

ಡಾ.ಬಿ.ಆರ್.ಅಂಬೇಡ್ಕರ್ ಭವನ ಸಮಿತಿ ಅವ್ಯವಹಾರ; ಹೋರಾಟಕ್ಕೆ ಜಯ

admincoorgdaily

ಡಾ.ಬಿ.ಆರ್.ಅಂಬೇಡ್ಕರ್ ಭವನ ಸಮಿತಿ ಅವ್ಯವಹಾರ; ಹೋರಾಟಕ್ಕೆ ಜಯ
ಮಡಿಕೇರಿ: ಸಿದ್ದಾಪುರ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಶತಮಾನೋತ್ಸವ ಭವನ ನಿರ್ಮಾಣ ಸಮಿತಿಯ ಆಡಳಿತದಲ್ಲಿನ ಅವ್ಯವಹಾರ ಮತ್ತು ಲೋಪದೋಷಗಳ ವಿರುದ್ಧ ನಡೆಸಿದ ಹೋರಾಟಕ್ಕೆ ಮಹತ್ವದ ಜಯ ಲಭಿಸಿದ್ದು, ಸರ್ಕಾರ ಸಮಿತಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಆದೇಶಿಸಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್.ಎಲ್ ದಿವಾಕರ್ ತಿಳಿಸಿದರು.

ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಶತಮಾನೋತ್ಸವ ಭವನ ನಿರ್ಮಾಣ ಸಮಿತಿಯ ಕಾರ್ಯನಿರ್ವಹಣೆಯಲ್ಲಿ ಲೋಪದೋಷಗಳು ಹಾಗೂ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಸೂಕ್ತ ತನಿಖೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಒಕ್ಕೂಟ ಹಾಗೂ ಕೊಡಗು ಜಿಲ್ಲೆಯ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ೨೦೨೬ರ ಫೆ.೧೦ರಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.
 ಮನವಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆಯಂತೆ ಸಹಕಾರ ಸಂಘಗಳ ಉಪ ನಿಬಂಧಕರು ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದರು ಎಂದು  ವಿವರಿಸಿದರು.

ವರದಿಯಲ್ಲಿ ಸಂಘವು ಕಾಲಕಾಲಕ್ಕೆ ಲೆಕ್ಕಪತ್ರಗಳ ತಪಾಸಣೆ ಮಾಡಿಸದಿರುವುದು ಹಾಗೂ ಬೈಲಾ ಪ್ರಕಾರ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸದಿರುವುದು ಸೇರಿದಂತೆ ಹಲವು ಆಡಳಿತಾತ್ಮಕ ಲೋಪದೋಷಗಳು ಕಂಡುಬಂದಿದೆ. ಪರಿಣಾಮ ಈ ಸಂಘಕ್ಕೆ ವಿರಾಜಪೇಟೆ ತಾಲ್ಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿಯಾಗಿದ್ದ ಹೇಮಂತ್ ಕುಮಾರ್ ಅವರನ್ನು ಸೆ.೨೪ರಂದು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದಷ್ಟು ಬೇಗ ಈ ಬಗ್ಗೆ ಕ್ರಮ ವಹಿಸಿ ಈ ಹಿಂದಿನ ಸಮಿತಿಯನ್ನು ವಜಾಗೊಳಿಸುವಂತಾಗಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ, ರಾಜ್ಯ ಸಂಚಾಲಕ ಕೆ.ಬಿ.ರಾಜು, ಸದಸ್ಯರಾದ ದೇವರಾಜು, ಹೆಚ್.ಕೆ.ಪ್ರೇಮಾ ಕೃಷ್ಣಪ್ಪ ಉಪಸ್ಥಿತರಿದ್ದರು.