Kodagu

ತಿತಿಮತಿಯಲ್ಲಿ ಜನಜಾತೀಯ ಗೌರವ ದಿವಸ್ ಆಚರಣೆ; ಬಿರ್ಸಾ ಮುಂಡಾ ಅವರ ಹೋರಾಟ, ಆದರ್ಶಗಳು ಇಂದಿನ ಪೀಳಿಗೆಗೆ ಪ್ರೇರಣೆ; ಶಾಸಕ ಪೊನ್ನಣ್ಣ

admincoorgdaily

ತಿತಿಮತಿಯಲ್ಲಿ ಜನಜಾತೀಯ ಗೌರವ ದಿವಸ್ ಆಚರಣೆ; ಬಿರ್ಸಾ ಮುಂಡಾ ಅವರ ಹೋರಾಟ, ಆದರ್ಶಗಳು ಇಂದಿನ ಪೀಳಿಗೆಗೆ ಪ್ರೇರಣೆ; ಶಾಸಕ ಪೊನ್ನಣ್ಣ
ಸಿದ್ದಾಪುರ:
ಬುಡಕಟ್ಟು ಸಮುದಾಯದ ಹೆಮ್ಮೆಯ ನಾಯಕ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗವಾನ್ ಬಿರ್ಸಾ ಮುಂಡಾ ಅವರ 151ನೇ ಜನ್ಮದಿನದ ಅಂಗವಾಗಿ ಪೊನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿ ಜನಜಾತೀಯ ಗೌರವ ದಿವಸ್ ಕಾರ್ಯಕ್ರಮವನ್ನು ಆಚರಿಸಲಾಯಿತು.


ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬ್ರಿಟಿಷರ ದಬ್ಬಾಳಿಕೆ ಹಾಗೂ ಶೋಷಣೆಯ ವಿರುದ್ಧ ಧೈರ್ಯದಿಂದ ಹೋರಾಡಿದ ಬಿರ್ಸಾ ಮುಂಡಾ ಅವರು ಬುಡಕಟ್ಟು ಸಮುದಾಯದ ಹಕ್ಕು, ಸ್ವಾಭಿಮಾನ ಮತ್ತು ಅಸ್ಮಿತೆಯ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಹೋರಾಟಗಾರರಾಗಿದ್ದಾರೆ. ಅವರ ಹೋರಾಟ ಹಾಗೂ ಆದರ್ಶಗಳು ಇಂದಿನ ಯುವಪೀಳಿಗೆಗೆ ಸದಾ ಪ್ರೇರಣೆಯಾಗಿವೆ ಬುಡಕಟ್ಟು ಸಮುದಾಯದ ಜನರು ಇಂದಿಗೂ ಅವರನ್ನು ಗೌರವದಿಂದ ಸ್ಮರಿಸುತ್ತಿರುವುದು ಅವರ ಹೋರಾಟದ ಮಹತ್ವವನ್ನು ಸಾರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಆದಿವಾಸಿ ಸಮುದಾಯದ ವತಿಯಿಂದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು

ಕಾರ್ಯಕ್ರಮದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ,
ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ವಿರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ವಿ. ಜಾನ್ಸನ್,ಅಕ್ಕ ಐಎಎಸ್ ಅಕಾಡೆಮಿ ಸಂಸ್ಥಾಪಕ ನಿರ್ದೇಶಕ ಡಾ. ಶಿವಕುಮಾರ್,ಆದಿವಾಸಿ ಸಮುದಾಯದ ಮುಖಂಡರಾದ ಕುಡಿಯರ ಮುತ್ತಪ್ಪ, ಭೋಜಪ್ಪ, ಮಲ್ಲಪ್ಪ, ಪಿ.ಸಿ. ರಾಮು, ಸಿದ್ದಪ್ಪ, ಮಣಿ ಕುಞ್ಞ, ಪುಷ್ಪ, ಐಟಿಡಿಪಿ ಅಧಿಕಾರಿ ಭಾಗ್ಯರಥಿ, ತಾಲೂಕು ಅಧಿಕಾರಿ ತೇಜ್ ರಾಜ್ ಸೇರಿದಂತೆ ಆದಿವಾಸಿ ಸಮುದಾಯದ ಮುಖಂಡರು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.