ನವೆಂಬರ್ 28 ಮತ್ತು 29 ರಂದು ಮಂಗಳೂರಿನಲ್ಲಿ ಜನನುಡಿ ಸಾಂಸ್ಕೃತಿಕ ಹಾಗೂ ವಿಚಾರ ಸಮ್ಮೇಳನ
admincoorgdaily

ವಿರಾಜಪೇಟೆ: ನವೆಂಬರ್ 28 ಮತ್ತು 29 ರಂದು ಮಂಗಳೂರಿನಲ್ಲಿ 'ಯುವಜನ ರಾಜಕಾರಣ: ದಿಕ್ಕು -ಭವಿಷ್ಯ- ಸವಾಲು' ಎಂಬ ಪ್ರಧಾನ ಆಶಯದೊಂದಿಗೆ ನಡೆಯಲಿರುವ ಎರಡು ದಿನಗಳ'ಜನನುಡಿ-2026' ಸಾಂಸ್ಕöÈತಿಕ ಹಾಗೂ ವಿಚಾರ ಸಮ್ಮೇಳನದ ಪೋಸ್ಟರ್ ಅನ್ನು ವಿರಾಜಪೇಟೆಯ ಸಿಐಟಿಯು ಕಚೇರಿ ಆವರಣದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಬಿಡುಗಡೆಗೊಳಿಸಲಾಯಿತು.
ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಮಳವಳ್ಳಿಯಿಂದ ಆಗಮಿಸಿದ್ದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸಹ ಕಾರ್ಯದರ್ಶಿ ಸುಶೀಲಾ ಅವರು, ಇಂದು ಮಹಿಳೆಯರ ಅಭ್ಯುದಯದ ಬಗ್ಗೆ ದೊಡ್ಡ ಮಾತುಗಳು ಕೇಳಿಬರುತ್ತಿವೆಯಾದರೂ, ವಾಸ್ತವದಲ್ಲಿ ಮಹಿಳೆಯರು ತೀವ್ರ ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟದಲ್ಲಿದ್ದಾರೆ. ಪ್ರಮುಖವಾಗಿ ಮೈಕ್ರೋ ಫೈನಾನ್ಸ್ ಕಂಪನಿಗಳ ಅತಿಯಾದ ಬಡ್ಡಿ ದರ, ಸಾಲ ವಸೂಲಾತಿ ಹೆಸರಿನಲ್ಲಿ ನಡೆಯುತ್ತಿರುವ ಕಿರುಕುಳ ಮತ್ತು ದೌರ್ಜನ್ಯದಿಂದಾಗಿ ಗ್ರಾಮೀಣ ಹಾಗೂ ಶ್ರಮಿಕ ವರ್ಗದ ಮಹಿಳೆಯರು ಬದುಕು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ" ಎಂದು ಆತಂಕ ವ್ಯಕ್ತಪಡಿಸಿದರು.
"ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವಲ್ಲಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಮತ್ತು ಮಹಿಳೆಯರಿಗೆ ಪೂರಕವಾದ ಸುರಕ್ಷಿತ ವಾತಾವರಣ ನಿರ್ಮಿಸುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ದೇಶದಲ್ಲಿ ನಡೆಯುತ್ತಿರುವ ಜನವಿರೋಧಿ ಬೆಳವಣಿಗೆಗಳನ್ನು ಮಹಿಳೆಯರು ಅರ್ಥಮಾಡಿಕೊಂಡು ಸಂಘಟಿತರಾದಾಗ ಮಾತ್ರ ನಿಜವಾದ ಸಬಲೀಕರಣ ಸಾಧ್ಯ. ಪ್ರಜಾಪ್ರಭುತ್ವ, ಸಮಾನತೆ ಮತ್ತು ಮಹಿಳಾ ವಿಮೋಚನೆಯ ಆಶಯದೊಂದಿಗೆ ನಮ್ಮ ಸಂಘಟನೆಯು ನಿರಂತರವಾಗಿ ಹೋರಾಟ ನಡೆಸುತ್ತಿದೆ. ಯುವಜನರು ಮತ್ತು ಮಹಿಳೆಯರಿಗೆ ಸರಿಯಾದ ರಾಜಕೀಯ ದಿಕ್ಕು ತೋರಿಸಲು 'ಜನನುಡಿ' ಸಮ್ಮೇಳನ ಅತ್ಯಂತ ಮಹತ್ವದ ವೇದಿಕೆಯಾಗಿದೆ"ಎಂದು ಅವರು ಕರೆ ನೀಡಿದರು.
ಕೊಡಗು ಜಿಲ್ಲಾ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸಂಚಾಲಕಿ ಪದ್ಮಿನಿ ಶ್ರೀಧರ್ ಮಾತನಾಡಿ,"ಜಿಲ್ಲೆಯ ಕಾಫಿ ತೋಟದ ಕಾರ್ಮಿಕ ಮಹಿಳೆಯರು, ಅಸಂಘಟಿತ ವಲಯದ ಶ್ರಮಿಕರು ಹಾಗೂ ಬಡ ಕುಟುಂಬಗಳ ಹಕ್ಕುಗಳಿಗಾಗಿ ಸಂಘಟನೆಯು ಈಗಾಗಲೇ ಹಲವಾರು ಹೋರಾಟಗಳನ್ನು ನಡೆಸಿ ನ್ಯಾಯ ಕೊಡಿಸಿದೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆ, ಪಡಿತರ ವ್ಯವಸ್ಥೆಯ ಸುಧಾರಣೆ, ವಸತಿ ಮತ್ತು ಮೂಲಭೂತ ಸೌಕರ್ಯಗಳಿಗಾಗಿ ನಮ್ಮ ಹೋರಾಟ ನಿರಂತರವಾಗಿ ಸಾಗಿದೆ. ಮಂಗಳೂರಿನಲ್ಲಿ ನಡೆಯಲಿರುವ 'ಜನ-ನುಡಿ' ಸಮ್ಮೇಳನದಲ್ಲಿ ಜಿಲ್ಲೆಯ ಮೂಲೆಮೂಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಯುವಜನರು ಪಾಲ್ಗೊಳ್ಳುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು" ಎಂದು ಮನವಿ ಮಾಡಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಎ.ಸಿ. ಸಾಬು ಮಾತನಾಡಿ,"ದುಡಿಯುವ ವರ್ಗ ಮತ್ತು ಮಹಿಳೆಯರ ಸಮಸ್ಯೆಗಳು ಬೇರೆ ಬೇರೆಯಲ್ಲ, ಅವು ಒಂದಕ್ಕೊಂದು ಬೆಸೆದುಕೊಂಡಿವೆ. ಇಂದು ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸಲಾಗುತ್ತಿದ್ದು, ಇದರಿಂದ ಅತಿ ಹೆಚ್ಚು ನಷ್ಟ ಅನುಭವಿಸುತ್ತಿರುವವರು ದುಡಿಯುವ ಮಹಿಳೆಯರೇ ಆಗಿದ್ದಾರೆ. ಸರ್ಕಾರದ ಕಾರ್ಪೊರೇಟ್ ಪರ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ಮತ್ತು ಮಹಿಳಾ ಸಂಘಟನೆಗಳು ಒಗ್ಗೂಡಿ ಬಲಿಷ್ಠ ಹೋರಾಟ ಕಟ್ಟುವುದು ಇಂದಿನ ತುರ್ತು ಅಗತ್ಯವಾಗಿದೆ. ಯುವರಾಜಕಾರಣದ ದಿಕ್ಕು ಮತ್ತು ಸವಾಲುಗಳನ್ನು ಚರ್ಚಿಸುವ 'ಜನನುಡಿ' ಸಮ್ಮೇಳನಕ್ಕೆ ಸಿಐಟಿಯು ಸಂಪೂರ್ಣ ಬೆಂಬಲ ನೀಡಲಿದ್ದು, ನಮ್ಮ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ"ಎಂದರು.
ಸಂಘಟನೆಯ ಪ್ರಮುಖರಾದ ಕುಸುಮಾ ಮಾತನಾಡಿ, ಗ್ರಾಮೀಣ ಹಾಗೂ ತೋಟ ಕಾರ್ಮಿಕ ವಲಯದ ಮಹಿಳೆಯರು ಇಂದಿಗೂ ಹಲವು ರೀತಿಯ ತಾರತಮ್ಯಗಳನ್ನು ಎದುರಿಸುತ್ತಿದ್ದಾರೆ. ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳು ಮತ್ತು ಸುರಕ್ಷಿತ ವಾತಾವರಣ ಕಲ್ಪಿಸಬೇಕು. ಮಹಿಳೆಯರ ಆರೋಗ್ಯ ಮತ್ತು ಪೌಷ್ಟಿಕಾಂಶದ ಕೊರತೆ ನೀಗಿಸಲು ಸರ್ಕಾರ ವಿಶೇಷ ಗಮನ ಹರಿಸಬೇಕು. ಈ ಎಲ್ಲಾ ಹಕ್ಕುಗಳಿಗಾಗಿ ಸಂಘಟನೆಯ ಹೋರಾಟವನ್ನು ಗ್ರಾಮ ಮಟ್ಟದಲ್ಲಿ ಇನ್ನಷ್ಟು ಬಲಪಡಿಸಬೇಕಿದೆ"ಎಂದು ಹೇಳಿದರು.
ಇನ್ನೋರ್ವ ಪ್ರಮುಖರಾದ ಪ್ರೇಮಾ ಮಾತನಾಡಿ,"ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೆ, ಸಾಮಾಜಿಕ, ಸಾಂಸ್ಕöÈತಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಹಲವಾರು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.