ಕೊಡಗು ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆ ಬಲವರ್ಧನೆಗೆ ಒತ್ತು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿಯಾದ ಜೆಡಿಎಸ್ ಮುಖಂಡರು
admincoorgdaily

ವಿರಾಜಪೇಟೆ: ಕೊಡಗು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಬೇರುಗಳನ್ನು ತಳಮಟ್ಟದಿಂದ ಗಟ್ಟಿಗೊಳಿಸುವ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ, ಜೆಡಿಎಸ್ ನಿಯೋಗವು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.
ಈ ಸಂದರ್ಭದಲ್ಲಿ ಜಿಲ್ಲೆಯ ರಾಜಕೀಯ ಬೆಳವಣಿಗೆಗಳು, ರೈತರ ಸಮಸ್ಯೆಗಳು ಹಾಗೂ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.
ಸಮನ್ವಯ ಸಮಿತಿ ರಚನೆಗೆ ಆಗ್ರಹ:
ಜಿಲ್ಲೆಯಲ್ಲಿ ಜಾತ್ಯತೀತ ಜನತಾದಳ ಮತ್ತು ಭಾರತೀಯ ಜನತಾ ಪಕ್ಷದ ನಡುವೆ ಉತ್ತಮ ಬಾಂಧವ್ಯವನ್ನು ಏರ್ಪಡಿಸಲು ಹಾಗೂ ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಪುರಸಭೆ ಚುನಾವಣೆಗಳಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಹೆಜ್ಜೆ ಹಾಕಲು ಸೂಕ್ತ ವೇದಿಕೆಯಾಗಿ 'ಸಮನ್ವಯ ಸಮಿತಿ'ಯನ್ನು ಕೂಡಲೇ ರಚಿಸಬೇಕೆಂದು ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು. ಈ ಸಮಿತಿಯ ಮೂಲಕ ಕಾರ್ಯಕರ್ತರಲ್ಲಿ ಹುರುಪು ತುಂಬಿ, ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಲು ರೂಪುರೇಷೆ ಸಿದ್ಧಪಡಿಸುವಂತೆ ಕೋರಲಾಯಿತು.
ಕಸ್ತೂರಿ ರಂಗನ್ ವರದಿ ವಿರೋಧ ಹಾಗೂ ರೈತರ ಪರ ನಿಲುವು:
ಕೊಡಗಿನ ಪರಿಸರ ಸೂಕ್ಷ÷್ಮ ಪ್ರದೇಶದ ನೆಪದಲ್ಲಿ ಇಲ್ಲಿನ ಕಾಫಿ ಬೆಳೆಗಾರರು, ಕೃಷಿಕರು ಮತ್ತು ಸಾಮಾನ್ಯ ಜನರ ಬದುಕಿಗೆ ಮಾರಕವಾಗಿ ಪರಿಣಮಿಸಿರುವ ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಲು ಅವಕಾಶ ನೀಡಬಾರದು. ಕೇಂದ್ರ ಸರಕಾರದ ಮಟ್ಟದಲ್ಲಿ ಈ ವರದಿಯ ವಿರುದ್ಧ ಧ್ವನಿ ಎತ್ತಿ ರೈತರ ಹಿತಾಸಕ್ತಿಯನ್ನು ಕಾಪಾಡುವಂತೆ ಸಚಿವರಿಗೆ ವಿಶೇಷ ಮನವಿ ಸಲ್ಲಿಸಲಾಯಿತು.
ಸಂಘಟನೆಗೆ ನಾಯಕರಿಂದ ಮಾರ್ಗದರ್ಶನ:
ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಪಕ್ಷವನ್ನು ಪುನಶ್ಚೇತನಗೊಳಿಸುವ ಕಾರ್ಯಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಪಕ್ಷದ ಸಂಘಟನೆಯನ್ನು ಬಲಪಡಿಸಲು ಮತ್ತು ಕಾರ್ಯಕರ್ತರಿಗೆ ಧೈರ್ಯ ತುಂಬಲು ಶೀಘ್ರದಲ್ಲೇ ಕೊಡಗು ಜಿಲ್ಲೆಗೆ ಭೇಟಿ ನೀಡುವುದಾಗಿ ಭರವಸೆ ನೀಡಿದರು.
ಈ ಮಹತ್ವದ ಭೇಟಿಯಲ್ಲಿ ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷರಾದ ಸಿ.ಎಲ್. ವಿಸ್ವ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾದ ಶಿವದಾಸ್, ಹಾಗೂ ಮಡಿಕೇರಿ ತಾಲೂಕು ಅಧ್ಯಕ್ಷರಾದ ರವಿ ಕಿರಣ್,ಯುವ ನಾಯಕ ಸ್ವಾಗತ್ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದು, ಪಕ್ಷದ ಸಂಘಟನೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸಚಿವರೊಂದಿಗೆ ಸಮಾಲೋಚನೆ ನಡೆಸಿದರು.