Kodagu

ಪತ್ರಕರ್ತರ ಕ್ರಿಕೆಟ್: ಕೊಡಗು ಅರೇಬಿಕಾ–ಮಂಡ್ಯ ಜಂಟಿ ಚಾಂಪಿಯನ್

admincoorgdaily

ಪತ್ರಕರ್ತರ ಕ್ರಿಕೆಟ್: ಕೊಡಗು ಅರೇಬಿಕಾ–ಮಂಡ್ಯ ಜಂಟಿ ಚಾಂಪಿಯನ್
ಮಡಿಕೇರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ 
ಪತ್ರಕರ್ತರ ಸಂಘದ ವತಿಯಿಂದ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗು ಅರೇಬಿಕಾ ಹಾಗೂ ಮಂಡ್ಯ ತಂಡಗಳು ಜಂಟಿ ಚಾಂಪಿಯನ್ ಪ್ರಶಸ್ತಿಯನ್ನು ಹಂಚಿಕೊಂಡವು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯಾವಳಿಯ ಅಂತಿಮ ಹಂತದಲ್ಲಿ ಸಂಜೆ ಸುರಿದ ಭಾರಿ ಮಳೆ ಆಟಕ್ಕೆ ಅಡ್ಡಿಯುಂಟುಮಾಡಿತು. ಪ್ಲೇ ಆಫ್ ಪಂದ್ಯಗಳನ್ನು ನಡೆಸುವುದು ಕಷ್ಟಸಾಧ್ಯವಾಯಿತು. 
ಇದರೊಂದಿಗೆ ಕತ್ತಲು ಆವರಿಸಿ ಪ್ರತಿಕೂಲ ಹವಾಮಾನ ಪರಿಸ್ಥಿತಿ ನಿರ್ಮಾಣವಾಯಿತು.
ಈ ಹಿನ್ನೆಲೆಯಲ್ಲಿ ಫೈನಲ್ ಪ್ರವೇಶಿಸಿದ್ದ ಮಂಡ್ಯ ಹಾಗೂ ಕೊಡಗು ಅರೇಬಿಕಾ ತಂಡಗಳನ್ನು ಜಂಟಿ ವಿಜೇತರೆಂದು ಆಯೋಜಕರು ಘೋಷಿಸಿದರು. 

ಆದರೆ, ಚಾಂಪಿಯನ್ ಟ್ರೋಫಿಯನ್ನು ಯಾವ ತಂಡಕ್ಕೆ ನೀಡಬೇಕೆಂಬ ಕುತೂಹಲ ಮೂಡಿದ ಹಿನ್ನೆಲೆಯಲ್ಲಿ ಚರ್ಚೆ ನಡೆಸಿ, ಬಾಲ್ ಔಟ್ ಪ್ರಕ್ರಿಯೆ ಮೂಲಕ ಟ್ರೋಫಿ ವಿಜೇತರನ್ನು ನಿರ್ಧರಿಸಲು ತೀರ್ಮಾನಿಸಲಾಯಿತು.

ಇದರಂತೆ ಎರಡೂ ತಂಡಗಳಿಗೆ ತಲಾ ಐದು ಎಸೆತಗಳನ್ನು ಎಸೆಯುವ ಅವಕಾಶ ನೀಡಲಾಯಿತು. ಎದುರಾಳಿ ತಂಡದ ವಿಕೆಟ್‌ಗಳನ್ನು ಹೆಚ್ಚು ಬಾರಿ ಉರುಳಿಸುವ ತಂಡಕ್ಕೆ ಚಾಂಪಿಯನ್ ಟ್ರೋಫಿ ನೀಡಲು ನಿರ್ಧರಿಸಲಾಯಿತು. ಈ ರೋಚಕ ಪ್ರಕ್ರಿಯೆಯಲ್ಲಿ 1-0 ಅಂತರದಲ್ಲಿ ಮಂಡ್ಯ ತಂಡ ಮೇಲುಗೈ ಸಾಧಿಸಿ ಚಾಂಪಿಯನ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ವಿಶೇಷವೆಂದರೆ, ವಿಜೇತ ಹಾಗೂ ರನ್ನರ್ ಅಪ್ ತಂಡಗಳಿಗೆ ನಿಗದಿಯಾಗಿದ್ದ ಒಟ್ಟು ರೂ.1.50 ಲಕ್ಷ ನಗದು ಬಹುಮಾನವನ್ನು ಎರಡೂ ತಂಡಗಳಿಗೆ ಸಮನಾಗಿ ಹಂಚಿಕೆ ಮಾಡಿ ವಿತರಿಸಲಾಯಿತು.

ಸಿನಿಮೀಯ ಮಾದರಿಯಲ್ಲಿ ಟ್ರೋಫಿ ನಿರ್ಧಾರ
ಮಳೆ ಮತ್ತು ಕತ್ತಲಿನ ಕಾರಣದಿಂದ ಬಾಲ್ ಔಟ್ ಪ್ರಕ್ರಿಯೆ ನಡೆಸುವುದೇ ಸವಾಲಿನ ಕೆಲಸವಾಗಿತ್ತು. ಈ ಸಂದರ್ಭದಲ್ಲಿ ಮೈದಾನದಲ್ಲಿದ್ದ ಕಾರುಗಳ ಹೆಡ್‌ಲೈಟ್‌ಗಳನ್ನು ಬೆಳಕಿನ ವ್ಯವಸ್ಥೆಯಾಗಿ ಬಳಸಿಕೊಂಡು ಪಂದ್ಯಾವಳಿಯ ಅತ್ಯಂತ ಕುತೂಹಲಕಾರಿ ಕ್ಷಣಕ್ಕೆ ವೇದಿಕೆ ಸಿದ್ಧಪಡಿಸಲಾಯಿತು.

ಕಾರುಗಳ ಬೆಳಕಿನಲ್ಲಿ ನಡೆದ ಬಾಲ್ ಔಟ್ ಪ್ರಕ್ರಿಯೆ ಕ್ರೀಡಾಭಿಮಾನಿಗಳಲ್ಲಿ ರೋಚಕತೆ ಮೂಡಿಸಿತು. ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅವರು ಕೂಡ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು. ಇಡೀ ಮೈದಾನ ವಾಹನಗಳ ಬೆಳಕಿನಿಂದ ಕಂಗೊಳಿಸುತ್ತಿದ್ದಂತೆ ನಡೆದ ಈ ಪ್ರಕ್ರಿಯೆ ಸಿನಿಮೀಯ ದೃಶ್ಯವನ್ನು ನೆನಪಿಸುವಂತಿದ್ದು, ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯ ಸ್ಮರಣೀಯ ಕ್ಷಣವಾಗಿ ಮೂಡಿಬಂತು.
ಉಳಿದಂತೆ ಬಾಗಲಕೋಟೆ ತೃತೀಯ, ಚಿಕ್ಕಬಳ್ಳಾಪುರ ಚತುರ್ಥ ಬಹುಮಾನ ತನ್ನದಾಗಿಸಿಕೊಂಡಿತು. 

ಕೊಡಗಿನ 2 ತಂಡಗಳು ಸೇರಿದಂತೆ 24 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದವು.
ಬಹುಮಾನ ವಿತರಣೆ ಕಾರ್ಯಕ್ರಮ
 ಪತ್ರಕರ್ತರು ಸಂಘಟಿತರಾದರೆ ಸಮಾಜ ಸದೃಢವಾಗಿರುತ್ತದೆ. ರಾಜಕಾರಣಿಗಳು ಸರಿದಾರಿಯಲ್ಲಿ ಸಾಗಲು ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಕ್ರೀಡೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯಾಗಿದ್ದು, ಜಾತಿ-ಭೇದ, ಭಾವನೆಗಳಿಗೆ ಅವಕಾಶವಿಲ್ಲದ ವೇದಿಕೆಯಾಗಿದೆ ಎಂದು ಶಾಸಕರುಗಳಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅಭಿಮತ ವ್ಯಕ್ತಪಡಿಸಿದರು. 

ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುವುದರೊಂದಿಗೆ ಪರಸ್ಪರ ಸ್ನೇಹ, ಸೌಹಾರ್ದತೆ ಬೆಳೆಯುತ್ತದೆ. ಪತ್ರಕರ್ತರು ಇದೇ ರೀತಿ ಕ್ರೀಡೆಯ ಮೂಲಕ ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ದಿನನಿತ್ಯದ ಒತ್ತಡದ ನಡುವೆಯೂ ಪತ್ರಕರ್ತರು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿರುವುದು ಗಮನಾರ್ಹ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಗೆಲುವೊಂದೇ ಮುಖ್ಯವಲ್ಲ, ಸೋಲು ಕೂಡ ಗೆಲುವಿನ ಮೆಟ್ಟಿಲಾಗುತ್ತದೆ. ಇಂತಹ ಕ್ರೀಡಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗು ಜಿಲ್ಲೆ ಈ ಪಂದ್ಯಾವಳಿಯನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸುವ ಮೂಲಕ ಸಂಘಟನಾ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. 13 ವರ್ಷಗಳ ಹಿಂದೆ ಕೂಡ ಅಚ್ಚುಕಟ್ಟಾಗಿ ಕ್ರೀಡಾಕೂಟ ಆಯೋಜಿಸಿದ್ದ ಕೊಡಗು ಇದೀಗ ಮತ್ತೊಮ್ಮೆ ರಾಜ್ಯಮಟ್ಟದ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಿದೆ. ಇದು ಸಂಘದ ಯಶಸ್ಸಿನ ಮತ್ತೊಂದು ಹೆಜ್ಜೆಯಾಗಿದೆ. ಹವಾಮಾನ ವೈಪರೀತ್ಯದಿಂದ ಕೆಲವು ಸಮಸ್ಯೆಗಳು ಎದುರಾದರೂ ಸಮರ್ಥವಾಗಿ ಪಂದ್ಯಾಟ ನಡೆಸಲಾಗಿದೆ. ಎಂದಿಗೂ ಕ್ರೀಡಾಸ್ಫೂರ್ತಿ ಮರೆಯಬಾರದು. ಕ್ರೀಡೆಯಲ್ಲಿ ಬೆಳೆಸಿಕೊಂಡ ಸ್ಫೂರ್ತಿಯನ್ನು ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದರು.
ರಿಪಬ್ಲಿಕ್ ನೆಟ್ ವರ್ಕ್ ಅಧ್ಯಕ್ಷ ಚೇರಂಡ ಕಿಶನ್ ಮಾದಪ್ಪ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮನೋಲ್ಲಾಸ ದೊರೆಯುವುದರೊಂದಿಗೆ ಹೊಸ ಚೈತನ್ಯ ಲಭಿಸುತ್ತದೆ ಎಂದರು.

ಹಿಂದಿನ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ, ಇಷ್ಟೊಂದು ಸಂಖ್ಯೆಯ ಪತ್ರಕರ್ತರನ್ನು ಒಗ್ಗೂಡಿಸಿ ಕಾರ್ಯಕ್ರಮ ನಿರ್ವಹಿಸುವುದು ಸುಲಭದ ಕೆಲಸವಲ್ಲ. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಚ್ಚುಕಟ್ಟಾಗಿ ಪಂದ್ಯಾವಳಿ ಆಯೋಜಿಸಿದೆ. ಒಂದು ಕಾಲದಲ್ಲಿ ಪತ್ರಕರ್ತರು ಒಂದಾಗುವುದೇ ಕಷ್ಟವಾಗಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ಸಂಘಟಿತರಾಗಿ ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿರುವುದು ಸಂತಸದ ವಿಚಾರ ಎಂದರು.

ಉದ್ಯಮಿ ಅವರೆಮಾದಂಡ ಶರಣ್ ಪೂಣಚ್ಚ ಮಾತನಾಡಿ, ಕಾವೇರಿಯನ್ನು ಪೂಜನೀಯ ಭಾವನೆಯಿಂದ ಕಾಣುವ ಕೊಡಗು ಮತ್ತು ಮಂಡ್ಯ ಜಿಲ್ಲೆಗಳ ತಂಡಗಳು ಜಂಟಿ ಚಾಂಪಿಯನ್ ಆಗಿರುವುದು ವಿಶೇಷ ಹಾಗೂ ಗಮನಾರ್ಹ ಸಂಗತಿ ಎಂದರು.

ಉದ್ಯಮಿ ಎಡಿಕೇರಿ ಪ್ರಸನ್ನ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಕರ್ತರು ಕ್ರೀಡೆಯ ಮೂಲಕ ಒಂದಾಗಿರುವುದು ಸಂತಸದ ವಿಚಾರ. ಕೊಡಗಿನ ಕಾಫಿ ಬೆಳೆಗಳಾದ ಅರೇಬಿಕಾ ಹಾಗೂ ರೊಬಸ್ಟಾ ಹೆಸರಿನಲ್ಲಿ ತಂಡಗಳಿಗೆ ನಾಮಕರಣ ಮಾಡಿ ಕಾಫಿ ತಳಿಗಳನ್ನು ರಾಜ್ಯಕ್ಕೆ ಪರಿಚಯಿಸಿರುವುದು ವಿಶೇಷವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಶಶಿಧರ್, ವಾರ್ತಾಧಿಕಾರಿ ಚಿನ್ನಸ್ವಾಮಿ, ಹಿರಿಯ ಪತ್ರಕರ್ತ ಉಳ್ಳಿಯಡ ಪೂವಯ್ಯ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ರಾಜ್ಯ ಸಮಿತಿ ಸದಸ್ಯೆ ಬಿ.ಆರ್. ಸವಿತಾ ರೈ, ರಾಷ್ಟ್ರೀಯ ಸಮಿತಿ ಸದಸ್ಯ ಪಾರ್ಥ ಚಿಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್, ತಾಲೂಕು ಅಧ್ಯಕ್ಷರುಗಳಾದ ರೆಜಿತ್ ಕುಮಾರ್, ಎಂ.ಎನ್.ಚಂದ್ರಮೋಹನ್, ವಿಶ್ವ ಕುಮಾರ್, ಮೈದಾನ ಸಮಿತಿ ಸಂಚಾಲಕ ಮಂಜು ಸುವರ್ಣ, ಆಹಾರ ಸಮಿತಿ ಸಂಚಾಲಕ ಅರುಣ್ ಕುಮಾರ್ ಸೇರಿದಂತೆ ರಾಜ್ಯ ಸಂಘದ ಪದಾಧಿಕಾರಿಗಳು, ಇನ್ನಿತರರು ಹಾಜರಿದ್ದರು. 


ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಮಂಡ್ಯ ತಂಡದ ದಿಲೀಪ್, ಬೆಸ್ಟ್ ಬ್ಯಾಟ್ಸ್ ಮನ್ ಹಾಸನ ತಂಡದ ಅಭಿಜಿತ್, ಬೆಸ್ಟ್ ಬೌಲರ್ ಬಾಗಲಕೋಟೆಯ ಪರಶುರಾಮ್ ಸನಗಿ, ಬೆಸ್ಟ್ ಕ್ಯಾಚ್ ಪ್ರಶಸ್ತಿಯನ್ನು  ಕೊಡಗು ಅರೇಬಿಕಾ ತಂಡದ ಅಖಿಲೇಶ್, ಬೆಸ್ಟ್ ಕೀಪರ್ ಮಂಡ್ಯ ತಂಡದ ನಂದನ್ ರಾಮಕೃಷ್ಣ,, ಬೆಸ್ಟ್ ಫೀಲ್ಡರ್ ಕೊಡಗು ಅರೇಬಿಕಾ ತಂಡದ  ಇಸ್ಮಾಯಿಲ್ ಕಂಡಕರೆ, ಉತ್ತಮ ತಂಡದ ಪ್ರಶಸ್ತಿಯನ್ನು ಚಿಕ್ಕಮಗಳೂರು, ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿ ಬಾಗಲಕೋಟೆ ತಂಡದ ಮುತ್ತು ಪಡೆದುಕೊಂಡರು.