Kodagu

ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಕೆ.ಎ.ಯಾಕುಬ್ ಖಂಡನೆ

admincoorgdaily

ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಕೆ.ಎ.ಯಾಕುಬ್ ಖಂಡನೆ
ಮಡಿಕೇರಿ: ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಕೇರಳಿಗರ ಕುರಿತು ನೀಡಿರುವ ಹೇಳಿಕೆ ಖಂಡನೀಯವೆಂದು ಕೆಪಿಸಿಸಿ ಸದಸ್ಯ ಕೆ.ಎ.ಯಾಕುಬ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೇರಳ ಕರ್ನಾಟಕ ರಾಜ್ಯದ ನೆರೆ ರಾಜ್ಯವಾಗಿದ್ದು, ತಲೆತಲಾಂತರಗಳಿಂದ ಎರಡೂ ರಾಜ್ಯಗಳು ಸೌಹಾರ್ದತೆಯಿಂದ ನಡೆದುಕೊಂಡಿವೆ. ಒಂದು ರಾಜ್ಯದವರು ಮತ್ತೊಂದು ರಾಜ್ಯಕ್ಕೆ ಬದುಕು ಹರಸಿ ಹೋಗುವುದು ಸಹಜ ಪ್ರಕ್ರಿಯೆಯಾಗಿದೆ. ಕೇರಳದವರು ಕೊಡಗು ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧೆಡೆ ಉದ್ಯೋಗವನ್ನು ಕಂಡುಕೊಂಡಿದ್ದಾರೆ, ಶ್ರಮದ ಜೀವನ ನಡೆಸಿ ತಮ್ಮ ವ್ಯಾಪಾರ ವಹಿವಾಟುಗಳನ್ನು ವಿಸ್ತರಿಸಿದ್ದಾರೆ. ಇದರಿಂದ ಕರ್ನಾಟಕ ರಾಜ್ಯಕ್ಕೆ ತೆರಿಗೆ ರೂಪದಲ್ಲಿ ಅಪಾರ ಆದಾಯ ಹರಿದು ಬರುತ್ತಿದೆ.

 ಕೇರಳದವರಂತೆ ಇತರ ರಾಜ್ಯಗಳ ಜನರು ಕೂಡ ಕರ್ನಾಟಕ ರಾಜ್ಯದಲ್ಲಿ ನೆಲೆ ನಿಂತು ಇಲ್ಲಿನ ಸಂಸ್ಕೃತಿ ಆಚಾರ ವಿಚಾರ ನೆಲ ಜಲಕ್ಕೆ ಗೌರವ ನೀಡುತ್ತಿದ್ದಾರೆ. ಇಲ್ಲಿ ನೆಲೆ ನಿಂತಿರುವ ಅಕ್ಕಪಕ್ಕದ ರಾಜ್ಯದವರು ಕರ್ನಾಟಕಕ್ಕೆ ವಿರುದ್ಧವಾಗಿ ಎಂದಿಗೂ ನಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಕೇರಳಿಗರು ಕರ್ನಾಟಕದ ಸಂಸ್ಕೃತಿಯನ್ನು ಗೌರವಿಸಿದ್ದಾರೆ, ಮಾತ್ರವಲ್ಲದೆ ತಮ್ಮ ಮೂಲ ಕೇರಳ ಸಂಸ್ಕೃತಿಯನ್ನು ವಿನಿಮಯ ಮಾಡಿಕೊಂಡು ದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳನ್ನು ಗಟ್ಟಿಗೊಳಿಸಿದ್ದಾರೆ. 
ಪ್ರತಾಪ್ ಸಿಂಹ ಅವರು ಅವಹೇಳನ ಮಾಡಿರುವಂತೆ ಕೇರಳಿಗರು ಇಲ್ಲಿನ ಸಂಸ್ಕೃತಿಯನ್ನು ಹಾಳು ಮಾಡಿಲ್ಲ. ತೆಂಗಿನ ಮರವನ್ನು ಭಾರತೀಯರು ಕಲ್ಪವೃಕ್ಷವೆಂದು ಗೌರವಿಸುತ್ತಾರೆ. ಕೇರಳದಲ್ಲಿರುವ ತೆಂಗಿನ ಮರಗಳು ಕೂಡ ಕಲ್ಪವೃಕ್ಷಗಳೇ ಆಗಿವೆ. ಇಲ್ಲಿ ಹರಿಯುವ ನೀರು ಕೂಡ ಜೀವಜಲವೇ ಆಗಿದೆ. ಇವೆರಡನ್ನು ಕೇವಲ ಎಂದು ಕಂಡಿರುವ ಪ್ರತಾಪ್ ಸಿಂಹ ಅವರ ಮನೋಸ್ಥಿತಿ ಅವರ ಘನತೆಗೆ ತಕ್ಕುದಲ್ಲ ಎಂದು ತಿಳಿಸಿದ್ದಾರೆ. 

ಕೇರಳಿಗರ ಬುದ್ಧಿವಂತಿಕೆಯ ಬಗ್ಗೆ ಕೂಡ ಅವರು ಪ್ರಶ್ನೆ ಮಾಡಿದ್ದಾರೆ. ಕೇರಳಿಗರ ವ್ಯಾಪಾರ ವಹಿವಾಟಿನ ವಿಸ್ತರಣೆ ಮತ್ತು ಪ್ರಗತಿ ಅವರ ಬುದ್ಧಿವಂತಿಕೆಗೆ ಸ್ಪಷ್ಟ ಸಾಕ್ಷಿಯಾಗಿದೆ. ಇದನ್ನು ಪ್ರತಾಪ್ ಸಿಂಹ ಅವರು ಅರಿತುಕೊಳ್ಳಬೇಕು. ಭಾರತೀಯರು ಹೊರ ದೇಶಗಳಲ್ಲೂ ಬದುಕು ಕಟ್ಟಿಕೊಂಡಿದ್ದಾರೆ. ರಾಜಕೀಯ ಸ್ಥಾನಮಾನ ಗಿಟ್ಟಿಸಿಕೊಂಡಿದ್ದಾರೆ, ಇದು ಪ್ರಕೃತಿ ಸಹಜ ಬೆಳವಣಿಗೆಯಾಗಿದೆ.

 ಸಕಲೇಶಪುರದ ಪ್ರತಾಪ್ ಸಿಂಹ ಅವರು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಲಿಲ್ಲವೇ, ಮಲೆಯಾಳಿಗಳ ಮತಗಳನ್ನು ಪಡೆದಿಲ್ಲವೇ, ಮತ ನೀಡುವಂತೆ ಮಲೆಯಾಳಿಗಳಿಗೆ ಕೈ ಮುಗಿದಿಲ್ಲವೇ ಎಂದು ಕೆ.ಎ.ಯಾಕುಬ್ ಪ್ರಶ್ನಿಸಿದ್ದಾರೆ. 
ಪ್ರತಾಪ್ ಸಿಂಹ ಅವರು ಬಹಿರಂಗವಾಗಿ ಕೇರಳಿಗರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.