ಕ.ಸಾ.ಪ.ವತಿಯಿಂದ ಕುಶಾಲನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆ.ಟಿ.ಸುಬ್ಬರಾವ್ ದತ್ತಿ ಕಾರ್ಯಕ್ರಮ
admincoorgdaily

ಕುಶಾಲನಗರ, ಸೆ.11 :
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡಗು ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ಜಿಲ್ಲೆಯ ಕವಿಗಳು ಮತ್ತು ಸಾಹಿತಿಗಳು
ಪಶ್ಚಿಮಘಟ್ಟ ಸಾಲಿನ ಇಲ್ಲಿನ ಪ್ರಕೃತಿ, ಪರಿಸರ, ಜೀವನದಿ ಕಾವೇರಿ, ಜನಪದ ಹಾಗೂ ಸಂಸ್ಕೃತಿ ಮತ್ತು ಸಾಹಿತ್ಯ ಪ್ರಮುಖ ಸ್ಥಾನ ಪಡೆದಿವೆ ಎಂದು ಚಿಂತಕರೂ ಆದ ನಿವೃತ್ತ ಕಲಾ ಶಿಕ್ಷಕ ಉ.ರಾ.ನಾಗೇಶ್ ಹೇಳಿದರು.
ಕೊಡಗು ಜಿಲ್ಲಾ
ಕನ್ನಡ ಸಾಹಿತ್ಯ ಪರಿಷತ್ತು(ಕ.ಸಾ.ಪ.) ಮತ್ತು
ಕುಶಾಲನಗರ ತಾಲ್ಲೂಕು ಕ.ಸಾ.ಪ. ಘಟಕ ಹಾಗೂ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ತ್ರಿವೇಣಿ ತ್ರಿಭಾಷಾ ಸಂಘದ
ಸಂಯುಕ್ತಾಶ್ರಯದಲ್ಲಿ
"ಕನ್ನಡ ಸಾಹಿತ್ಯದಲ್ಲಿ ಕೊಡಗು" ಎಂಬ ವಿಷಯದ ಕುರಿತು
ಏರ್ಪಡಿಸಲಾಗಿದ್ದ
ಕೆ.ಟಿ.ಸುಬ್ಬರಾವ್ ಅವರ ವಾರ್ಷಿಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ
ಕೊಡಗಿನಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆ ಕುರಿತು ಮಾತನಾಡಿದರು.
ಜಿಲ್ಲೆ ಕಂಡ ಹೆಸರಾಂತ ಕಥೆಗಾರ್ತಿ ಕೊಡಗಿನ ಗೌರಮ್ಮ,
ಜಿಲ್ಲೆಯ ಹಿರಿಯ ಕವಿ ಹರದಾಸ ಅಪ್ಪಚ್ಚು ಕವಿ, ಕವಿ ಪಂಜೆ ಮಂಗೇಶರಾಯರು,
ಕವಿ ಪಂಜೆ ಮಂಗೇಶರಾಯರು, ಸಾಹಿತಿ ದಿಗ್ಗಜ ಭಾರತೀಸುತ ಸೇರಿದಂತೆ ಇಂದಿನ ಹೊಸ ತಲೆಮಾರಿನ ಉದಯೋನ್ಮುಖ ಸಾಹಿತಿಗಳಿಗೂ ಕೂಡ ಕೊಡಗಿನ ಪ್ರಾಕೃತಿಕ ಸೌಂದರ್ಯವು ತಮ್ಮ ಸಾಹಿತ್ಯ ರಚನೆ ಮತ್ತು ಸಾಹಿತ್ಯ ಬೆಳವಣಿಗೆಗೆ ಸ್ಪೂರ್ತಿ ಮತ್ತು ಚೈತನ್ಯ ನೀಡಿದೆ ಎಂದು ಅವರು ಬಣ್ಣಿಸಿದರು.
ಕೊಡಗಿನ ನೆಲ- ಜಲ ಹಾಗೂ ಪ್ರಾಕೃತಿಕ ಸನ್ನಿವೇಶ ಹಾಗೂ ಕೊಡವ ಕಲೆ, ಸಂಸ್ಕೃತಿ- ಪರಂಪರೆಗಳ ಕುರಿತು ತಮ್ಮ ಹುತ್ತರಿ ಹಾಡಿನಲ್ಲಿ ಕೊಡಗಿನ ಪ್ರಾಕೃತಿಕ ಸನ್ನಿವೇಶಗಳನ್ನು ಚೆನ್ನಾಗಿ ಪ್ರತಿಬಿಂಬಿಸುವ ಮೂಲಕ ಕೊಡಗಿನ ಶೌರ್ಯವನ್ನು ಚಿತ್ರಿಸಿದ್ದಾರೆ ಎಂದು ಉ.ರಾ.ನಾಗೇಶ್ ಹೇಳಿದರು.
ಪಶ್ಚಿಮಘಟ್ಟದ ಜೀವನದಿ ಕಾವೇರಿ ಮಾತೆ ಮತ್ತು
ಕೊಡಗಿನ ಪ್ರಕೃತಿ ಸೌಂದರ್ಯವೇ ಜಿಲ್ಲೆಯಲ್ಲಿ
ಸಾಹಿತಿಗಳು ಮತ್ತು ಕವಿಗಳಿಗೆ ಸಾಹಿತ್ಯ ರಚನೆಗೆ
ಪ್ರೇರಣೆ ಮತ್ತು ಸ್ಪೂರ್ತಿ ನೀಡಿದೆ ಎಂದರು.
ಕೊಡಗಿನಲ್ಲಿ ಸಾಹಿತ್ಯ ಬೆಳವಣಿಗೆಗೆ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡಪರ ಮನಸ್ಸುಗಳು ಜತೆಗೂಡಿ ಕನ್ನಡ ಭಾಷಾ ಬೆಳವಣಿಗೆಗೆ ಜಿಲ್ಲೆಯ ಸಾಹಿತಿಗಳು ಸೇರಿದಂತೆ
ಹೊರಗಿನಿಂದ ಜಿಲ್ಲೆಗೆ ಬಂದ ಅನೇಕ ಕವಿಗಳು,ಸಾಹಿತಿಗಳು ಕೂಡ ಇಲ್ಲಿ ಉತ್ತಮ ಸಾಹಿತ್ಯ ಬರವಣಿಗೆಯೊಂದಿಗೆ ಕನ್ನಡ ಭಾಷಾ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ ಎಂದು ಚಿಂತಕ ಉ.ರಾ.ನಾಗೇಶ್ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸೋಮವಾರ
ಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಕನ್ನಡ ಭಾಷೆ ಮತ್ತು ಸಾಹಿತ್ಯ ಬೆಳವಣಿಗೆಗೆ ಪ್ರತಿಯೊಬ್ಬರೂ ತಮ್ಮನ್ನು ತೊಡಗಿಸಿಕೊಂಡಾಗ ಕನ್ನಡ ನಾಡು- ನುಡಿ, ಸಂಸ್ಕ್ರತಿ ಮತ್ತು ಪರಂಪರೆ ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಎಸ್.ಜಿ.ನಾಗರತ್ನ ಮಾತನಾಡಿ,
ಇಂತಹ ಸಾಹಿತ್ಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಕಲೆ,
ಸಂಸ್ಕೃತಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಭಿರುಚಿ ಬೆಳೆಸುವುದರೊಂದಿಗೆ ತಮ್ಮನ್ನು
ಕನ್ನಡ ನಾಡು- ನುಡಿ ಬೆಳವಣಿಗೆಗೆ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಮಾತನಾಡಿ,ಕನ್ನಡ ಸಾಹಿತ್ಯವು ಮಕ್ಕಳಲ್ಲಿ ಭಾಷಾ ಜ್ಞಾನ, ಬರವಣಿಗೆ ಕೌಶಲ್ಯ, ನೈತಿಕತೆ ಮತ್ತು ಕಲ್ಪನಾ ಶಕ್ತಿಯನ್ನು ಬೆಳೆಸುವ ಅತ್ಯಮೂಲ್ಯ ಕೊಡುಗೆ ನೀಡುವುದರೊಂದಿಗೆ ಅವರಲ್ಲಿ ಉತ್ತಮ ನಡವಳಿಕೆಯನ್ನು ಬೆಳೆಸಲು ಬಹಳ ಸಹಕಾರಿಯಾಗಿದೆ ಎಂದರು.
ಮಹಿಳಾ ಬರಹಗಾರ್ತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ, ವಿದ್ಯಾರ್ಥಿಗಳು
ಕೊಡಗಿನ ಸಾಹಿತಿಗಳ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಂಡು ತಮ್ಮನ್ನು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಇಂತಹ ಉಪನ್ಯಾಸ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವುದರೊಂದಿಗೆ ಅವರಲ್ಲಿ ಭಾಷಾ ಪ್ರೇಮ ಬೆಳೆಸಲು ನೆರವಾಗಲಿದೆ ಎಂದರು.
ಪ್ರೌಢಶಾಲಾ ವಿಭಾಗದ ಎಸ್.ಡಿ.ಎಂ.ಸಿ.ಅಧ್ಯಕ್ಷ
ಎಸ್.ಜೆ.ರವಿಕಿರಣ್ , ತಾಲ್ಲೂಕು ಕ.ಸಾ.ಪ. ಸಮಿತಿ ಸದಸ್ಯ ಎಂ.ಎನ್.ಕಾಳಪ್ಪ, ಕಸಾಪ ಸದಸ್ಯರಾದ ಸೂದನ ರತ್ನಾವತಿ, ಲೀಲಾಕುಮಾರಿ ತೊಡಿಕಾನ,
ಶಿಕ್ಷಕಿಯರಾದ ಕೆ.ಆರ್.ದೇವಕಿ, ಬಿ.ಬಿ.ಹೇಮಲತಾ, ಎನ್.ಜಿ.ನಂದಿನಿ ಮತ್ತು ಎಂ.ಪಿ.ರಶ್ಮಿ
ಇದ್ದರು. ವಿದ್ಯಾರ್ಥಿನಿ ದುರ್ಗಾ ಪರಮೇಶ್ವರಿ ಮತ್ತು ತಂಡದ ಸದಸ್ಯರು ಗೀತೆ ಹಾಡಿದರು.
ಪ್ರೌಢಶಾಲಾ ವಿದ್ಯಾರ್ಥಿಗಳು ಇದ್ದರು.