ಕಡಂಗ ಅರಪಟ್ಟು ಪೈಸಾರಿ ಅಂಗನವಾಡಿ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆದ ಪೋಷಣ್ ಮಾಸಾಚರಣೆ ಕಾರ್ಯಕ್ರಮ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ಕಡಂಗ ಅರಪಟ್ಟು ಪೈಸಾರಿ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆಯುಷ್ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶೀಲಾ ಅಶೋಕ್ ಮಾತನಾಡಿ ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ತಡೆಗಟ್ಟುವ ಉದ್ದೇಶದಿಂದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.
ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರ ಮಾಹಿತಿಯನ್ನು ಪೋಷಣ್ ಟ್ರ್ಯಾಕರ್ನಲ್ಲಿ ದಾಖಲಿಸಿ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಮಹತ್ವದ ಕುರಿತು ಮಾಹಿತಿ ನೀಡುವುದು ಸೀಮಂತ ಕಾರ್ಯಕ್ರಮದ ಉದ್ದೇಶವಾಗಿದೆ. ಇದರಿಂದ ಆರೋಗ್ಯವಂತ ಮಗುವಿನ ಜನನಕ್ಕೆ ಸಹಕಾರಿಯಾಗುತ್ತದೆ ಎಂದರು.ಮೊದಲ ಗರ್ಭಿಣಿಗೆ ಮಾತೃ ವಂದನಾ ಯೋಜನೆಯ ಸೌಲಭ್ಯ ಹಾಗೂ ಎರಡನೇ ಹೆಣ್ಣು ಮಗುವಿಗೆ ₹6,000 ರೂಗಳ ನೆರವನ್ನು ಇಲಾಖೆಯಿಂದ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಯ ಅಧಿಕಾರಿಗಳು ಪೌಷ್ಟಿಕ ಆಹಾರವನ್ನು ತಯಾರಿಸುವ ವಿಧಾನ ಹಾಗೂ ಅದರ ಮಹತ್ವದ ಕುರಿತು ಮಾಹಿತಿ ನೀಡಿದರು.
ಅರಪಟ್ಟು ಆಯುಷ್ ಆಸ್ಪತ್ರೆಯ ವೈದ್ಯೆ ಡಾ. ಶುಭ ಮಾತನಾಡಿ, ಆರೋಗ್ಯ ಉತ್ತಮವಾಗಿದ್ದರೆ ಜೀವನವೂ ಉತ್ತಮವಾಗಿರುತ್ತದೆ. ಸ್ಥಳೀಯವಾಗಿ ಬೆಳೆಯುವ ಹಣ್ಣು, ಸೊಪ್ಪು ಹಾಗೂ ತರಕಾರಿಗಳನ್ನು ಸೇವಿಸುವುದರಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಜಶೀಲಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಾದ ಕವಿತಾ ಹಾಗೂ ಸೌಮ್ಯ, ಸಹಾಯಕಿಯರು, ಪೋಷಕರು,ಮಕ್ಕಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಕವಿತಾ ಸ್ವಾಗತಿಸಿ, ವಂದಿಸಿದರು.