Kodagu

ಇಗ್ಗುತ್ತಪ್ಪ ಕೊಡವ ಕೂಟದಿಂದ ಕೈಲ್‌ಪೋದ್ ಸಂತೋಷ ಕೂಟ; ಗುತ್ತಿಗೆದಾರ ರಾಮಕೃಷ್ಣನ್‌ಗೆ ಸನ್ಮಾನ, ಪ್ರತಿಭೆಗಳಿಗೆ ಪುರಸ್ಕಾರ

admincoorgdaily

ಇಗ್ಗುತ್ತಪ್ಪ ಕೊಡವ ಕೂಟದಿಂದ ಕೈಲ್‌ಪೋದ್ ಸಂತೋಷ ಕೂಟ; ಗುತ್ತಿಗೆದಾರ ರಾಮಕೃಷ್ಣನ್‌ಗೆ ಸನ್ಮಾನ, ಪ್ರತಿಭೆಗಳಿಗೆ ಪುರಸ್ಕಾರ
ಪೊನ್ನಂಪೇಟೆ, ಸೆ.21: ಕೊಡಗಿನ ವಿಶಿಷ್ಟ ಹಬ್ಬವಾದ ಕೈಲ್‌ಪೋದ್ ಅನ್ನು ತಾಲೂಕಿನ ತಿತಿಮತಿಯ ಇಗ್ಗುತ್ತಪ್ಪ ಕೊಡವ ಕೂಟದ ವತಿಯಿಂದ ಸಾಂಪ್ರದಾಯಿಕ ಸಂಭ್ರಮದೊಂದಿಗೆ ಆಚರಿಸಲಾಯಿತು.

ಸೆ.20ರಂದು ಕೂಟದ ಸ್ವಂತ ನೂತನ ಕಟ್ಟಡದಲ್ಲಿ ನಡೆದ ಕೈಲ್‌ಪೋದ್ ಸಂತೋಷ ಕೂಟದಲ್ಲಿ ಸದಸ್ಯರು ಹಾಗೂ ಕುಟುಂಬಸ್ಥರು ಉತ್ಸಾಹದಿಂದ ಪಾಲ್ಗೊಂಡರು. ಕೊಡಗಿನ ಗಡಿ ಭಾಗವಾದ ತಿತಿಮತಿಯಲ್ಲಿ ದಾನಿಗಳಾದ ಚಿಂಡಮಾಡ ಸರಿತಾ ಅವರು ನೀಡಿದ ಜಾಗದಲ್ಲಿ, ದಾನಿಗಳ ಸಹಕಾರದಿಂದ ನಿರ್ಮಿಸಲಾಗಿರುವ ನೂತನ ಕಟ್ಟಡದಲ್ಲಿ ಹಬ್ಬವನ್ನು ಆಚರಿಸಿರುವುದು ವಿಶೇಷವಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಟದ ಅಧ್ಯಕ್ಷ ಬೊಳ್ತಂಡ ಪ್ರಕಾಶ್ ವಹಿಸಿದ್ದರು. ಕೊಡವರ ಆಚಾರ–ವಿಚಾರ, ಕಟ್ಟುಪಾಡು, ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ವಿವಿಧ ಸಾಂಪ್ರದಾಯಿಕ ಹಾಗೂ ಮನರಂಜನಾ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಇದೇ ಸಂದರ್ಭದಲ್ಲಿ ಕೂಟದ ನೂತನ ಕಟ್ಟಡ ನಿರ್ಮಾಣದ ಗುತ್ತಿಗೆದಾರ ರಾಮಕೃಷ್ಣನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಹಬ್ಬದ ಅಂಗವಾಗಿ ಆಗಮಿಸಿದ್ದವರಿಗೆ ಸಾಂಪ್ರದಾಯಿಕ ಕೊಡವ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ಸದಸ್ಯರು ಹಾಗೂ ಕುಟುಂಬಸ್ಥರ ಸಾಮೂಹಿಕ ಪಾಲ್ಗೊಳ್ಳುವಿಕೆಯಿಂದ ನಡೆದ ಕಾರ್ಯಕ್ರಮವು ಕೊಡವ ಸಂಪ್ರದಾಯ, ಪದ್ಧತಿ ಹಾಗೂ ಸಾಂಸ್ಕೃತಿಕ ಪರಂಪರೆಯ ಅನಾವರಣಕ್ಕೆ ವೇದಿಕೆಯಾಯಿತು.